ವಾಷಿಂಗ್ಟನ್ (ಪಿಟಿಐ): ಸಿಎನ್‌ಎನ್ ವರದಿಗಾರನ ಮಾಧ್ಯಮ ದಾಖಲೆಗಳನ್ನು ರದ್ದುಗೊಳಿಸಿರುವ ಶ್ವೇತಭವನ, ಅವರಿಗೆ ಇನ್ನು ಮುಂದೆ ಅಧ್ಯಕ್ಷರ ಕಚೇರಿಯ ಪ್ರವೇಶವನ್ನು ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಿಎನ್‌ಎನ್ ವರದಿಗಾರ ಜಿಮ್ ಅಕೊಸ್ಟಾ ವಾಗ್ವಾದ ನಡೆಸಿದ ನಂತರ ಶ್ವೇತಭವನ ಈ ನಿರ್ಧಾರ ಪ್ರಕಟಿಸಿದೆ.
ಅಧ್ಯಕ್ಷರೊಂದಿಗಿನ ವರದಿಗಾರನ ವರ್ತನೆ ‘ಅಸಹ್ಯಕರ’ ಹಾಗೂ ‘ಅತಿರೇಕ’ದ್ದಾಗಿತ್ತು ಎಂದು ಶ್ವೇತಭವನ ಹೇಳಿದ್ದರೆ, ಅಧ್ಯಕ್ಷರ ಕಚೇರಿಯ ಈ ನಿರ್ಧಾರ ‘ಪ್ರಜಾಪ್ರಭುತ್ವಕ್ಕೆ ಒಡ್ಡಿದ ಬೆದರಿಕೆ’ ಎಂದು ಸಿಎನ್‌ಎನ್ ಮಾಧ್ಯಮ ಸಂಸ್ಥೆ ಪ್ರತಿಕ್ರಿಯಿಸಿದೆ.
ಕೇಂದ್ರ ಅಮೆರಿಕದ ವಲಸಿಗರ ಮೇಲೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಅಕೊಸ್ಟಾ ಟ್ರಂಪ್‌ರನ್ನು ಪ್ರಶ್ನಿಸಲು ಮುಂದಾದಾಗ, ಅವರಿಗೆ ಕುಳಿತುಕೊಳ್ಳಲು ಸೂಚಿಸಿದ ಟ್ರಂಪ್, ಮೈಕ್ರೊಫೋನ್‌ನನ್ನು ತೆಗೆದಿಡುವಂತೆ ಆದೇಶಿಸಿದ್ದರು. ಇದನ್ನು ವಿರೋಧಿಸಿದ್ದ ಅಕೊಸ್ಟಾ ನಿಂತುಕೊಂಡೇ ಪ್ರಶ್ನೆ ಕೇಳುವುದನ್ನು ಮುಂದುವರಿಸಿದ್ದರು. ಆಗ, ಶ್ವೇತಭವನದ ಸಿಬ್ಬಂದಿ ಅಕೊಸ್ಟಾ ಅವರ ಮೈಕ್ರೋಫೋನ್ ಅನ್ನು ಕಸಿಯಲು ವಿಫಲ ಯತ್ನ ನಡೆಸಿದ್ದರು.
‘ಮುಂದಿನ ಆದೇಶದವರೆಗೆ ಅಕೊಸ್ಟಾ ಅವರಿಗೆ ಶ್ವೇತಭವನ ಪ್ರವೇಶ ಇಲ್ಲ’ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.