ADVERTISEMENT

ಗಾಜಾ ಯುದ್ಧ: ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಕೊಲಂಬಿಯಾ

ಏಜೆನ್ಸೀಸ್
Published 2 ಮೇ 2024, 4:24 IST
Last Updated 2 ಮೇ 2024, 4:24 IST
<div class="paragraphs"><p>ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಮತ್ತು ಕೊಲಂಬಿಯಾ ಅಧ್ಯಕ್ಷ&nbsp;ಗುಸ್ಟಾವೊ ಪೆಟ್ರೋ</p></div>

ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಮತ್ತು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ

   

ರಾಯಿಟರ್ಸ್‌

ಬೊಗೋಟಾ: ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ನಮ್ಮ ಸರ್ಕಾರ ಕಡಿದುಕೊಳ್ಳಲಿದೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದರು.

ADVERTISEMENT

ಬುಧವಾರ ನಡೆದ ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಮೆರವಣಿಗೆಯಲ್ಲಿ ಮಾತನಾಡಿದ ಪೆಟ್ರೊ, ‘ನರಹಂತಕ ಅಧ್ಯಕ್ಷನನ್ನು ಹೊಂದಿದ್ದಕ್ಕಾಗಿ ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೊಲಂಬಿಯಾ ಸರ್ಕಾರ ಕಡಿದುಕೊಳ್ಳಲಿದೆ. ಪ್ಯಾಲೆಸ್ಟೀನಿಯರು ಸತ್ತರೆ ಮಾನವೀಯತೆ ಸತ್ತಂತೆ. ಅದನ್ನು ಸಾಯಲು ನಾವು ಬಿಡುವುದಿಲ್ಲ’ ಎಂದಿದ್ದರು.

ಈ ವೇಳೆ ಇಸ್ರೇಲ್ ಗಾಜಾದಲ್ಲಿ ನಡೆಸಿದ ದಾಳಿಯನ್ನು ‘ಜನಾಂಗೀಯ ಹತ್ಯೆ’ ಎಂದು ಕರೆದಿರುವ ಪೆಟ್ರೋ, ಇಸ್ರೇಲ್‌ ಅನ್ನು ನಾಜಿಗೆ ಹೋಲಿಸಿದ್ದರು.

ಪೆಟ್ರೋ ಹೇಳಿಕೆಯನ್ನು ಖಂಡಿಸಿರುವ ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್, ‘ಶಿಶುಗಳನ್ನು ಸುಟ್ಟುಹಾಕಿದ, ಮಕ್ಕಳನ್ನು ಕೊಂದ, ಮಹಿಳೆಯರನ್ನು ಅತ್ಯಾಚಾರ ಮಾಡಿದ ಮತ್ತು ಅಮಾಯಕ ನಾಗರಿಕರನ್ನು ಅಪಹರಿಸಿದ ಹೇಯ ರಾಕ್ಷಸರ ಪರವಾಗಿ ಪೆಟ್ರೋ ನಿಂತಿದ್ದರೆಂದು ಇತಿಹಾಸವು ನೆನಪಿಟ್ಟುಕೊಳ್ಳುತ್ತದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೊಲಂಬಿಯಾವು ಇಸ್ರೇಲ್‌ ಹತ್ತಿರದ ಪಾಲುದಾರ ದೇಶದಲ್ಲಿ ಒಂದಾಗಿತ್ತು. 2022ರಲ್ಲಿ ಮೊದಲ ಎಡಪಂಥೀಯ ಅಧ್ಯಕ್ಷರಾಗಿ ಪೆಟ್ರೋ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳ ತೊಡಗಿತು.

ಈ ಹಿಂದೆ ಡ್ರಗ್ ಕಾರ್ಟೆಲ್‌ಗಳು ಮತ್ತು ಬಂಡಾಯ ಗುಂಪುಗಳ ವಿರುದ್ಧ ಹೋರಾಡಲು ಕೊಲಂಬಿಯಾವು ಯುದ್ಧ ವಿಮಾನಗಳು ಮತ್ತು ಮೆಷಿನ್ ಗನ್‌ಗಳನ್ನು ಇಸ್ರೇಲ್‌ನಿಂದ ಖರೀದಿಸುತ್ತಿತ್ತು. 2020ರಲ್ಲಿ ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.