ಕೊಲಂಬೊ: ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಬೆದರಿಕೆ ಹಾಕಿದ, ದಾಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಇತರ ಆರು ಮಂದಿಯನ್ನು ತಕ್ಷಣವೇ ಬಂಧಿಸಲು ಅಪರಾಧ ತನಿಖಾ ದಳಕ್ಕೆ (ಸಿಐಡಿ) ನಿರ್ದೇಶಿಸಬೇಕೆಂದು ಶುಕ್ರವಾರ ಶ್ರೀಲಂಕಾದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಈ ಬಗ್ಗೆ ಕೊಲಂಬೊ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಕೀಲ ಸೆನಕ ಪೆರೆರಾ ಎಂಬುವವರು ವೈಯಕ್ತಿಕ ದೂರು ದಾಖಲಿಸಿದ್ದಾರೆ.
ದೇಶದ ಆರ್ಥಿಕ ದುಸ್ಥಿತಿಯ ಹೊಣೆಯನ್ನು ಮಹಿಂದಾ ರಾಜಪಕ್ಸ ಹೊರಬೇಕು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ರಾಜಪಕ್ಸ ಬೆಂಬಲಿಗರು ದಾಳಿ ನಡೆಸಿದ್ದರು.ಈ ವೇಳೆ 9 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಅರ್ಜಿ ಮೇ 17 ರಂದು ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ತಿಳಿನಾ ಗಮಾಗೆ ಹೇಳಿದರು.
ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ, ಸಂಸದರಾದ ಜಾನ್‌ಸ್ಟೊನ್ ಫೆರ್ನಾಂಡೋ, ಸಂಜೀವ ಎದಿರಿಮನ್ನೆ, ಸನತ್ ನಿಶಾಂತ ಮತ್ತು ಮೊರಟುವಾ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಸಮನ್ ಲಾಲ್ ಫೆರ್ನಾಂಡೋ, ಹಿರಿಯ ಪೊಲೀಸ್ ಅಧಿಕಾರಿಗಳಾದ ದೇಶಬಂದು ತೆನ್ನಕೋನ್ ಮತ್ತು ಚಂದನಾ ವಿಕ್ರಮರತ್ನ ಅವರನ್ನು ತಕ್ಷಣ ಬಂಧಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.