ADVERTISEMENT

ಪಾಕ್ ಅಧ್ಯಕ್ಷ ಅರಿಫ್ ಅಲ್ವಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 12:00 IST
Last Updated 23 ಫೆಬ್ರುವರಿ 2020, 12:00 IST
ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಭೇಟಿಯಾದ ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ
ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಭೇಟಿಯಾದ ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ   

ಇಸ್ಲಾಮಾಬಾದ್: ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಅವರು ಶನಿವಾರ ಲಾಹೋರ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಭೇಟಿಯಾಗಿದ್ದಾರೆ. ಉಭಯ ನಾಯಕರು ಗಡಿಯುದ್ದಕ್ಕೂ ಶಾಂತಿ ಸ್ಥಾಪಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಪಾಕ್ ಅಧ್ಯಕ್ಷರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶತ್ರುಘ್ನ ಸಿನ್ಹಾ ಅವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲುಪಾಕ್‌ಗೆ ತೆರಳಿದ್ದರು. ಈ ವೇಳೆ ಪಾಕಿಸ್ತಾನದ ಅಧ್ಯಕ್ಷರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಕಾಶ್ಮೀರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಲ್ವಿ ಅವರ ಕಚೇರಿ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಲ್ವಿ ಮತ್ತು ಸಿನ್ಹಾ ಅವರು ಉಪಖಂಡಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂಬುದನ್ನು ಉಭಯ ನಾಯಕರು ಪ್ರತಿಪಾದಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಸೇರಿದಂತೆ ಹಲವಾರು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಆದರೆ ರಾಜಕೀಯದ ಕುರಿತು ಚರ್ಚಿಸಿಲ್ಲ. ನನ್ನ ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರು ಮತ್ತು ಸಹಜವಾಗಿ ಮಾಧ್ಯಮಗಳು, ವಿದೇಶಿ ನೆಲದಲ್ಲಿ ರಾಜಕೀಯ ಅಥವಾ ಸರ್ಕಾರದ ಅಧಿಕಾರ ಹೊಂದಿಲ್ಲದಿದ್ದಾಗ ಒಬ್ಬರು ದೇಶಗಳ ನೀತಿಗಳ ಕುರಿತು ಚರ್ಚಿಸಬಾರದು ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಿನ್ಹಾ ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್370ಯನ್ನು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದೆ. ಅಂದಿನಿಂದ ಜಮ್ಮು ಮತ್ತು ಕಾಶ್ಮೀರದ ಮೇಲೆ ವಿಧಿಸಿರುವ ನಿರ್ಬಂಧದ ಕುರಿತು ನಾವು ವ್ಯಕ್ತಪಡಿಸಿರುವ ಕಾಳಜಿಗೆ ಶತ್ರುಘ್ನ ಸಿನ್ಹಾ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪಾಕ್ ಅಧ್ಯಕ್ಷ ಅಲ್ವಿ ಅವರ ಟ್ವೀಟ್‌ನಲ್ಲಿ ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ನಿರ್ಬಂಧಗಳ ಮಧ್ಯೆ ಕೇಂದ್ರ ಸರ್ಕಾರವು ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ನಾಯಕರನ್ನು ಕಳೆದ ಆಗಸ್ಟ್‌ನಿಂದಲೂ ಗೃಹ ಬಂಧನದಲ್ಲಿರಿಸಿದೆ. ಭದ್ರತಾ ದೃಷ್ಟಿಯಿಂದಈ ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಕೇಂದ್ರ, ಪರಿಸ್ಥಿತಿಯು ತಿಳಿಯಾಗುವವರೆಗೂ ಈ ಕ್ರಮ ಜಾರಿಯಲ್ಲಿರುತ್ತದೆ ಎಂದಿದೆ.

ಶತ್ರುಘ್ನ ಸಿನ್ಹಾ ಅವರು, ಪಾಕಿಸ್ತಾನದ ಉದ್ಯಮಿ ಮಿಯಾನ್ ಅಸಾದ್ ಅಹ್ಸಾನ್ ಅವರ ಆಮಂತ್ರಣದ ಮೇರೆಗೆ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದರು.

ಇಂದು ಮುಂಜಾನೆ ಟ್ವೀಟ್ ಮಾಡಿರುವ ಸಿನ್ಹಾ, ಇದೊಂದು ವೈಯಕ್ತಿಕ ಭೇಟಿಯಾಗಿದೆ ಮತ್ತು ಯಾವುದೇ ಅಧಿಕೃತ ಅಥವಾ ರಾಜಕೀಯ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.