ಹೇಗ್ (ನೆದರ್‌ಲೆಂಡ್): ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿ, ಹಡಗುಗಳ ಸಂಚಾರವನ್ನು ಒಂದು ವಾರ ನಿರ್ಬಂಧಿಸಿದ್ದ ಬೃಹತ್ ಹಡಗು ಕೊನೆಗೂ ನೆದರ್ಲೆಂಡ್‌ನ ರೋಟರ್‌ಡ್ಯಾಮ್ ಬಂದರು ತಲುಪಿದೆ. ಅದರಲ್ಲಿದ್ದ ಸರಕುಗಳನ್ನು ಇಳಿಸುವ ಕೆಲಸವೂ ಆರಂಭವಾಗಿದೆ.
ಹಲವು ತಿಂಗಳ ವಿಳಂಬ ಯಾನ ನಡೆಸಿರುವ ಎವರ್ ಗಿವನ್ ಹಡಗು, ಗುರುವಾರ ಮುಂಜಾನೆ ಬಂದರು ತಲುಪಿತು.
ನಾಲ್ಕು ಫುಟ್‌ಬಾಲ್ ಮೈದಾನಗಳಿಗಿಂತ ಉದ್ದದ 'ಎವರ್ ಗಿವನ್' ಹಡಗು ಮಾರ್ಚ್ 23ರಂದು ಸುಯೆಜ್ ಕಾಲುವೆಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯವಾಗಿತ್ತು. ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಮೇಲೆ ಕರಿಛಾಯೆ ಆವರಿಸಿತ್ತು.
ಆರು ದಿನಗಳ ನಿರಂತರ ಕಾರ್ಯಾಚರಣೆ ಪರಿಣಾಮವಾಗಿ ಕಾಲುವೆಯ ಬಂಧನದಿಂದ ಬಿಡುಗಡೆ ಪಡೆದಿದ್ದ ಹಡಗು ಸಂಚಾರ ಆರಂಭಿಸಿತ್ತು. ಆದರೆ, ಆರು ದಿನ ಕಾಲುವೆ ನಿರ್ಬಂಧವಾಗಿದ್ದ ಹಿನ್ನೆಲೆಯಲ್ಲಿ ಮಾರ್ಗದಲ್ಲಿ ಹಡಗುಗಳ ದಟ್ಟಣೆ ಉಂಟಾಗಿತ್ತು.
ಹಡಗು ಕಾಲುವೆಯಿಂದ ತೆರವಾಗಿತ್ತಾದರೂ, ಕಾಲುವೆ ಪ್ರಾಧಿಕಾರದೊಂದಿಗಿನ ಹಣಕಾಸಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಅದು ಸಂಚಾರ ಆರಂಭಿಸಿದ್ದು ಮಾತ್ರ ಜುಲೈ ಆರಂಭದಲ್ಲಿ. ಇದಕ್ಕಾಗಿ ಮೂರು ತಿಂಗಳ ಕಾಲ ಹಡಗನ್ನು ಕಾಲುವೆಯ ‘ಗ್ರೇಟ್ ಬಿಟ್ಟರ್ ಲೇಕ್‘ ಎಂಬಲ್ಲಿ ಹಿಡಿದಿಡಲಾಗಿತ್ತು. ಮಾತುಕತೆ, ನ್ಯಾಯಾಲಯದ ಆದೇಶದ ನಂತರ ಹಡಗಿನ ಒಡೆತನ ಹೊಂದಿರುವ ಜಪಾನ್‌ನ ‘ಶೋಯಿ ಕಿಸೆನ್ ಕೈಶಾ ಲಿಮಿಟೆಡ್‘ ಕಾಲುವೆ ಅಧಿಕಾರಿಗಳೊಂದಿಗೆ ಪರಿಹಾರದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಹಡಗು ರೋಟರ್‌ಡ್ಯಾಮ್‌ಗೆ ಯಾನ ಆರಂಭಿಸಿತ್ತು.
ಇದನ್ನೂ ಓದಿ: ಸುಯೆಜ್ ಕಾಲುವೆ ಸಂಚಾರ ಸುಗಮ: ತೈಲ ಬೆಲೆ ಇಳಿಕೆ
ಆಗಸ್ಟ್ 5 ರವರೆಗೆ ಹಡಗು ರೋಟರ್‌ಡ್ಯಾಮ್‌ನಲ್ಲೇ ಉಳಿಯಲಿದೆ. ನಂತರ ಅದು ಇಂಗ್ಲೆಂಡ್‌ನ ಫೆಲಿಕ್‌ಸ್ಟೋವ್ ಬಂದರಿಗೆ ತೆರಳಲಿದೆ ಎಂದು ಡಚ್ ಬಂದರು ಆಡಳಿತ ತಿಳಿಸಿದೆ.
ಏನಾಗಿತ್ತು ಅಂದು?
ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡವಾಯಿತು. ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.