ಬಾಕು(ಅಜರ್‌ಬೈಜಾನ್): ಫ್ರಾನ್ಸ್ ಸೇರಿದಂತೆ ಐರೋಪ್ಯ ಒಕ್ಕೂಟದ ಕೆಲ ದೇಶಗಳ ಕುರಿತು ಹವಾಮಾನ ಶೃಂಗಸಭೆಯ (ಸಿಒಪಿ29) ಅತಿಥೇಯ ರಾಷ್ಟ್ರ ಅಜರ್‌ಬೈಜಾನ್‌ನ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಆಡಿದ ಮಾತುಗಳು ತೀವ್ರ ಚರ್ಚೆಗೆ ಕಾರಣವಾದವು.
‘ಅಲಿಯೇವ್ ಮಾಡಿರುವ ಆರೋಪಗಳನ್ನು ಒಪ್ಪಿಕೊಳ್ಳಲಾಗದು’ ಎಂದು ಐರೋಪ್ಯ ಒಕ್ಕೂಟವು (ಇ.ಯು) ಅಜರ್‌ಬೈಜಾನ್‌ಗೆ ತಿರುಗೇಟು ನೀಡಿದೆ.
ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ್ದ ಅಲಿಯೇವ್,‘ಐರೋಪ್ಯ ಒಕ್ಕೂಟವು ‘ರಾಜಕೀಯ ಭ್ರಷ್ಟಾಚಾರ’ದ ದ್ಯೋತಕವಾಗಿದೆ. ಫ್ರಾನ್ಸ್ ವಸಾಹತುಶಾಹಿ ಆಳ್ವಿಕೆ ಮನಸ್ಥಿತಿಯಿಂದ ಹೊರಬಂದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದರು.
‘ಅಲಿಯೇವ್ ಅವರು ಮಾಡಿರುವ ‘ಸ್ವೀಕಾರಾರ್ಹವಲ್ಲದ’ ಆರೋಪಗಳು ಹವಾಮಾನ ಬದಲಾವಣೆ ಶೃಂಗಸಭೆಯ ಉದ್ದೇಶವನ್ನು ಹಾಳು ಮಾಡುವಂತಿವೆ‘ ಎಂದು ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಧ್ಯಕ್ಷ ಅಲಿಯೇವ್ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಸ್ಪಷ್ಟನೆ ನೀಡಿರುವ ‘ಸಿಒಪಿ29’ ಅಧ್ಯಕ್ಷೀಯ ಪ್ರಧಾನ ಸಮಾಲೋಚಕ ಯಲ್ಸಿನ್ ರಫಿಯೇವ್,‘ಅಜರ್‌ಬೈಜಾನ್ ಎಲ್ಲರನ್ನು ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ‘ ಎಂದಿದ್ದಾರೆ.
‘ರಚನಾತ್ಮಕ ಮಾತುಕತೆ ಹಾಗೂ ಫಲದಾಯಕ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.