ADVERTISEMENT

ವಾಯು ಮಾಲಿನ್ಯ: ಪಾಕಿಸ್ತಾನ, ಬಾಂಗ್ಲಾದೇಶ ಸಹಭಾಗಿತ್ವಕ್ಕೆ ಭಾರತ ಕರೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 19:30 IST
Last Updated 13 ನವೆಂಬರ್ 2024, 19:30 IST
ಸಾಂದರ್ಭಿಕ ಚಿತ್ರ –ಎಎಫ್‌ಪಿ
ಸಾಂದರ್ಭಿಕ ಚಿತ್ರ –ಎಎಫ್‌ಪಿ   

ಬಾಕು: ಮಾಲಿನ್ಯವು ಗಡಿಗಳನ್ನು ಮೀರಿದ ಸಮಸ್ಯೆ ಎಂದು ಹೇಳಿರುವ ಭಾರತವು, ವಾಯುಮಾಲಿನ್ಯವನ್ನು ತಗ್ಗಿಸಲು ಸಹಭಾಗಿತ್ವದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವಿಧ ದೇಶಗಳನ್ನು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಒತ್ತಾಯಿಸಿದೆ.

ಉತ್ತರ ಭಾರತದಲ್ಲಿ ವಾಯುಮಾಲಿನ್ಯವು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಒತ್ತಾಯ ಬಂದಿದೆ. ಅದರಲ್ಲೂ, ದೇಶದ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಬಹಳ ಕುಸಿದಿದೆ.

ಅಜರ್‌ಬೈಜಾನ್ ದೇಶದ ರಾಜಧಾನಿ ಬಾಕುವಿನಲ್ಲಿ ಹವಾಮಾನ ಬದಲಾವಣೆ ತಡೆ ವಾರ್ಷಿಕ ಸಭೆ ನಡೆಯುತ್ತಿದೆ. ಭಾರತದ ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ನರೇಶ್ ಪಾಲ್ ಗಂಗ್ವರ್ ಅವರು ಭಾಗಿಯಾಗಿದ್ದಾರೆ.

ADVERTISEMENT

ಲಾಹೋರ್‌ನಲ್ಲಿ ಗಾಳಿಯ ಗುಣಮಟ್ಟ ಕಡಿಮೆ ಆಗುವುದಕ್ಕೆ ಭಾರತದ ಕಡೆಯಿಂದ ಬೀಸುವ ಗಾಳಿ ಕಾರಣ ಎಂದು ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ದೂರಿತ್ತು.

ಹಣಕಾಸಿನ ನೆರವು: ಅಭಿವೃದ್ಧಿ ಹೊಂದಿದ ದೇಶಗಳು ನ್ಯಾಯಸಮ್ಮತ ನೆಲೆಯಲ್ಲಿ ಹಣಕಾಸಿನ ನೆರವನ್ನು ಒದಗಿಸಬೇಕು ಎಂಬ ನಿಲುವಿಗೆ ಇಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ತಡೆ ಮಾತುಕತೆಯಲ್ಲಿ ಭಾರತವು ಬಲವಾಗಿ ಅಂಟಿಕೊಂಡಿತು ಎಂದು ಮೂಲಗಳು ಹೇಳಿವೆ.

ಅಭಿವೃದ್ಧಿ ಹೊಂದುತ್ತಿರುವ ಸಮಾನಮನಸ್ಕ ದೇಶಗಳ ಜೊತೆಗೂಡಿ ಭಾರತವು ಈ ನಿಲುವು ತಾಳಿದೆ ಎಂದು ಗೊತ್ತಾಗಿದೆ.

ಈಗ ದೊರೆತಿರುವ ಹಣಕಾಸಿನ ನೆರವಿನಲ್ಲಿ ಶೇಕಡ 69ರಷ್ಟು ಪಾಲು ಸಾಲದ ರೂಪದಲ್ಲಿ ಬಂದಿದೆ. ಇದರಿಂದಾಗಿ ಈಗಾಗಲೇ ದುರ್ಬಲವಾಗಿರುವ ದೇಶಗಳ ಆರ್ಥಿಕ ಹೊರೆಯು ಇನ್ನಷ್ಟು ಹೆಚ್ಚಾಗಿದೆ ಎಂಬ ಕಳವಳ ಕೂಡ ವ್ಯಕ್ತವಾಗಿದೆ.

ಭೂಗ್ರಹದ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತಿರುವ ದೇಶಗಳೇ ಹವಾಮಾನ ವೈಪರೀತ್ಯದ ಹೊಣೆ ಹೊತ್ತು ಸಮಸ್ಯೆ ಬಗೆಹರಿಸಲು ಹಣದ ನೆರವು ನೀಡಬೇಕು.
–ಮುಹಮ್ಮದ್ ಯೂನಿಸ್, ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.