ಪ್ಯಾರಿಸ್: ಇಡೀ ವಿಶ್ವದಲ್ಲಿ ಕೊರೊನಾ ದಾಳಿ ಭೀತಿಯಿಂದ ಮಾನವ ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಮನೆಯಲ್ಲಿಯೇ ಬಂಧಿಯಾಗಿದ್ದರೆ, ಇತ್ತ ಕಾಡು ಪ್ರಾಣಿಗಳು ದೇಶ ವಿದೇಶಗಳ ಪಟ್ಟಣಗಳರಾಜಬೀದಿಗಳಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿವೆ.
ಪ್ರಕೃತಿ ವಿಪರ್ಯಾಸವೆಂದರೆ ಇದುವೆ, ಪ್ರಾಣಿಗಳಿಗೂ ಜಾಗ ಕೊಡದಂತೆ ಮಾನವ ಕಾಡನ್ನು ಆಕ್ರಮಿಸಿಕೊಂಡು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದ. ಇದರಿಂದ ಕಾಡು ಪ್ರಾಣಿಗಳಿಗೆ ವಾಸಿಸಲು ಜಾಗವೇ ಇಲ್ಲದೆಅಲೆದಾಡುತ್ತಿದ್ದವು. ಈಗ ಕೊರೊನಾ ವೈರಸ್ ಭೀತಿಯಿಂದಾಗಿ ವಿಶ್ವದೆಲ್ಲೆಡೆ ಜನರು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.
ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ರಸ್ತೆಗಳಲ್ಲಿ ಕಾಡಿನಿಂದ ಬಂದ ಬೃಹತ್ ಪಕ್ಷಿಗಳು ರಸ್ತೆಗಳಲ್ಲಿ ಅಡ್ಡಾಡುತ್ತಿವೆ. ಕೊರೊನಾ ದಾಳಿ ಭೀತಿ ಇಲ್ಲದಿದ್ದರೆ ಈ ಪ್ರದೇಶದಲ್ಲಿ ಜನಜಂಗುಳಿ ಇರುತ್ತಿತ್ತು. ಪಕ್ಷಿಗಳಿಗೆ ಪ್ರವೇಶ ಅಸಾಧ್ಯದ ಮಾತಾಗಿತ್ತು.
ಉತ್ತರಭಾರತದ ಡೆಹ್ರಾಡೂನ್‌ನಲ್ಲಿ ಜಿಂಕೆಯೊಂದು ರಸ್ತೆಯಲ್ಲಿ ಅಡ್ಡಾಡುತ್ತಿದ್ದುದನ್ನು ಭಾರತೀಯರು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದಾರೆ.
ಈಗ ಕೊರೊನಾ ವೈರಸ್ ದಾಳಿ ಭೀತಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಕಾಡು ಪ್ರಾಣಿಗಳು ಈಗ ಜನರು ಅಡ್ಡಾಡುತ್ತಿದ್ದ ಸ್ಥಳಗಳಲ್ಲಿ ಸಂಚರಿಸುತ್ತಿವೆ. ಚಿಲಿಯ ರಾಜಧಾನಿ ಸಾಂಟಿಯಾಗೋದಲ್ಲಿಯೂ ಕಾಡು ಪ್ರಾಣಿಗಳು ರಸ್ತೆಗಳಿದು ತಮ್ಮ ಇಚ್ಛೆಯಂತೆ ವಿಹರಿಸುತ್ತಿವೆ.
ಬಾರ್ಸಿಲೋನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಡು ಹಂದಿಗಳು ಬೆಟ್ಟದಿಂದ ಇಳಿದು ಬಂದು ರಸ್ತೆಗಳಲ್ಲಿಸಂಚರಿಸುತ್ತಿವೆ.
ಜಪಾನ್‌ನ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಜಿಂಕೆಗಳು ಕಾಣಿಸಿಕೊಂಡಿವೆ. ವೆನಿಸ್‌ನ ಕಾಲುವೆಗಳಲ್ಲಿ ಡಾಲ್ಫಿನ್‌ಗಳು ಯಾರದೆ ಅಡ್ಡಿ ಇಲ್ಲದೆ ಈಜುತ್ತಿವೆ. ಅಲ್ಲದೆ, ಮೆಡಿಟರೇನಿಯನ್ ಸಮುದ್ರದ ಬಂದರುಗಳಲ್ಲಿ ಬಂದು ಪುಟಿದೇಳುತ್ತಿವೆ.
ಈ ಪರಿಸ್ಥಿತಿ ಗಮನಿಸಿದ ಫ್ರಾನ್ಸ್ ನ್ಯಾಚುರಲ್ ಹಿಸ್ಟರಿ ಮ್ಟೂಸಿಯಂನ ಸಂಶೋಧನಾ ವಿಭಾಗ ಮುಖ್ಯಸ್ಥ ರೊಮೇನ್ ಜುಲಿಯಾರ್ಡ್ ನಮ್ಮ ಪಟ್ಟಣ ಮತ್ತು ನಗರಗಳಿಗೆ ಬರಲು ಅವುಗಳಿಗೆ ಈಗ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುತ್ತಾರೆ.
ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಯಾವ ಪ್ರದೇಶದಲ್ಲಿ ನಿಶ್ಯಬ್ಧ ಇರುತ್ತದೆಯೋ ಅಲ್ಲಿಗೆ ನೇರವಾಗಿ ಪ್ರಾಣಿ ಪಕ್ಷಿಗಳು ಪ್ರವೇಶಿಸುತ್ತವೆ. ಅಲ್ಲಿಂದ ಅವು ತಮ್ಮ ವರ್ತನೆಯನ್ನೇ ಬದಲಿಸಿಕೊಳ್ಳುತ್ತವೆಎಂದಿದ್ದಾರೆ. ನಗರದ ಉದ್ಯಾನವನಗಳಲ್ಲಿ ಗುಬ್ಬಚ್ಚಿ, ಪಾರಿವಾಳಗಳು ವಾಸಿಸುತ್ತಿದ್ದವು. ಈಗ ಎಲ್ಲಾ ಕಡೆ ಜಾಗ ಖಾಲಿ ಖಾಲಿಯಾಗಿದೆ ಇತರೆ ಪ್ರಾಣಿಗಳಿಗೂ ಅವಕಾಶವಾಗಿದೆ ಎನ್ನುತ್ತಾರೆ.
ಹಕ್ಕಿಗಳ ಚಿಲಿಪಿಲಿ ಶಬ್ದ ಮನೆಯಲ್ಲಿಯೇ ಬಂಧಿಗಳಾಗಿರುವ ಎಷ್ಟೋ ಮಂದಿಯ ಮನಸ್ಸಿಗೆ ಉಲ್ಲಾಸ ನೀಡುತ್ತಿದೆ. ಇಲ್ಲಿಯತನಕ ವಾಹನಗಳ ಶಬ್ದದಿಂದಾಗಿ ಪಕ್ಷಿಗಳ ಚಿಲಿಪಿಲಿ ಶಬ್ದ ಕೇಳುತ್ತಿರಲಿಲ್ಲ. ವಾಹನ ಶಬ್ದಗಳಿಂದ ಬರುತ್ತಿದ್ದರೆ,ಪಕ್ಷಿಗಳು ತಮ್ಮ ಕೂಗನ್ನು ನಿಲ್ಲಿಸುತ್ತವೆ. ಈಗ ಎಲ್ಲರೂ ತಮ್ಮ ಮನೆಯಲ್ಲಿ ಇರುವುದರಿಂದ ಪಕ್ಷಿಗಳು ತಮ್ಮ ಇಚ್ಛೆಯಂತೆ ವಿಹರಿಸಲು ಕೂಗಲು ಸಾಧ್ಯವಾಗಿದೆ. ಮನುಷ್ಯರಿಂದ ನಿರ್ಮಾಣವಾದ ಶಬ್ದಮಾಲಿನ್ಯದಿಂದ ಪ್ರಾಣಿಸಂಕುಲ ನಡುಗಿಹೋಗಿದೆ ಎಂದು ಮ್ಯೂಸಿಯಂ ತಜ್ಞ ಜೆರೋಮ್ ಹೇಳುತ್ತಾರೆ.
ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಇದು ಹಲವು ಪ್ರಾಣಿ ಪಕ್ಷಿ ಸಂಕುಲದ ಉಳಿವಿನ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿದೆ. ಕೆಲ ಪ್ರಾಣಿಗಳು ಈ ಸಮಯದಲ್ಲಿತಮ್ಮ ಸಂಗಾತಿಗಳನ್ನು ಹುಡುಕಿಕೊಂಡು ಹೋಗುತ್ತವೆ ಎಂದು ಓಎಫ್ ಬಿಯ ಅಧಿಕಾರಿ ಜೀನ್ ನೋಯಲ್ ರಿಫೇಲ್ ಹೇಳುತ್ತಾರೆ.
ನಾಯಿಗಳ ಜೊತೆ ಮಾಲೀಕರು ವಾಯುವಿಹಾರಕ್ಕೆ ತೆರಳುವುದರಿಂದ ಕೆಲವು ಜಿಂಕೆ ಮರಿಗಳ ಓಡಾಟಕ್ಕೂ ಅಡ್ಡಿಯಾಗುತ್ತದೆ. ಕೆಲ ಪಕ್ಷಿಗಳು ಸಮುದ್ರ ತೀರದಲ್ಲಿ ಮೊಟ್ಟೆ ಇಟ್ಟು ಮರಿಮಾಡುವ ಕೆಲಸ ಈಗ ನಿರಾತಂಕವಾಗಿ ನಡೆಯುತ್ತದೆ ಎನ್ನುತ್ತಾರೆ.
ಬಹುಮುಖ್ಯವಾಗಿ ಸದ್ಯದ ಪರಿಸ್ಥಿತಿ ನಮ್ಮ ಮತ್ತು ನಿಸರ್ಗದ ನಡುವಿನ ಸಂಬಂಧದಲ್ಲಿ ಮಹತ್ತರವಾದ ಬದಲಾವಣೆ ತಂದಿದೆ. ಮನುಷ್ಯರೆಲ್ಲರೂ ನಮ್ಮ ಮನೆಗಳಲ್ಲಿ ಬಂಧಿಗಳಾಗಿದ್ದೇವೆ. ಪ್ರಕೃತಿ ಎಷ್ಟು ಮುಖ್ಯವಾದದ್ದು ಎಂದುನಮಗೆ ಈಗ ಅರಿವಾಗುತ್ತಿದೆ ಎನ್ನುತ್ತಾರೆ ಜೆರೋಮ್.
ಪ್ರಖ್ಯಾತ ಪಕ್ಷಿ ತಜ್ಞ ಡೇವಿಡ್ ಲಿಂಡೋ ಈಗ ಕ್ವಾರಂಟೀನ್ ಆಗಿ ಮನೆಯಲ್ಲಿಯೇ ಬಂಧಿಯಾಗಿದ್ದರೂ ತಮ್ಮ ಮನೆಯ ಟೆರೇಸ್‌ನಿಂದಲೇ ಹಲವು ಬಗೆಯ ಪಕ್ಷಿಗಳನ್ನು ವೀಕ್ಷಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಡೇವಿಡ್ ಲಿಂಡೋ ಆಕಾಶ ಅನ್ನೋದು ಹಲವು ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯಿದ್ದಂತೆ. ಏನು ಬೇಕಾದರೂ ಹಾರಾಡಬಹುದು. ಅದು ಶಾಂತಿಯನ್ನು ನೀಡುತ್ತದೆ. ಅದನ್ನು ನೋಡುತ್ತಾ ಇರಿ ಎಂದು ಪಕ್ಷಿಪ್ರಿಯರಿಗೆ ಕಿವಿ ಮಾತು ಹೇಳಿದ್ದಾರೆ.
ರಿಫೆಲ್ ಜನರಿಗೆ ಎಚ್ಚರಿಕೆ ನೀಡಿದ್ದು, ಲಾಕ್ ಡೌನ್ ಒಂದು ದಿನ ಅಂತ್ಯಗೊಳ್ಳುತ್ತದೆ. ಆ ಸಮಯದಲ್ಲಿ ಶಾಲೆ, ಗೋಡೌನ್ ಸೇರಿದಂತೆ ಪಕ್ಷಿಗಳು ಗೂಡು ಕಟ್ಟಿರುತ್ತವೆ. ಅವುಗಳಿಗೆ ತೊಂದರೆ ಕೊಡಬೇಡಿ. ಜನರಿಗೆ ಪ್ರಕೃತಿಯ ಅಗತ್ಯ ಇದೆ.ಹೆಚ್ಚಿನ ಜನ ರಾಷ್ಯ್ರೀಯ ಉದ್ಯಾನವನಗಳಿಗೆ ಭೇಟಿ ಕೊಡುವುದರಿಂದ ಗಿಡಮರಗಳು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.