ಬೆಂಗಳೂರು: ಏಷ್ಯಾದ ಸಿರಿವಂತ ವ್ಯಕ್ತಿ ಜಾಕ್ ಮಾ ಅವರು 18 ಲಕ್ಷ ಮುಖಗವಸು ಹಾಗೂ ಕೊರೊನಾ ವೈರಸ್ ಪರೀಕ್ಷೆಗೆ ಬಳಸುವ ಕಿಟ್‌ಗಳನ್ನು ಪೂರೈಸುವುದಾಗಿ ಪಣ ತೊಟ್ಟಿದ್ದಾರೆ.
ಏಷ್ಯಾದ ಬಡ ರಾಷ್ಟ್ರಗಳಿಗೆ ವೈರಸ್ ಸೋಂಕು ಪರೀಕ್ಷೆ ನಡೆಸಲು ಅನುವಾಗುವ2,10,000 ಕಿಟ್‌ಗಳು ಹಾಗೂ 18 ಲಕ್ಷ ಮುಖಗವಸುಗಳನ್ನು ಒಗದಿಸಲು ಅಲಿಬಾಬಾ ಸಂಸ್ಥಾಪಕಜಾಕ್ ಮಾ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಅಫ್ಘನಿಸ್ತಾನ, ಬಾಂಗ್ಲಾದೇಶ, ಕಾಂಬೋಡಿಯಾ, ಲಾವೋಸ್, ಮಾಲ್ಡೀವ್ಸ್, ಮಂಗೋಲಿಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೆ ಕೊರೊನಾ ವೈರಸ್ ಸೋಂಕು ಎದುರಿಸಲು ಸಹಕಾರ ಸಿಗಲಿದೆ ಎಂದು ಜಾಕ್ ಮಾ ಟ್ವೀಟಿಸಿದ್ದಾರೆ.
ರಕ್ಷಣಾ ಸ್ಯೂಟ್‌ಗಳು, ವೆಂಟಿಲೇಟರ್‌ಗಳು ಹಾಗೂ ಥರ್ಮೊಮೀಟರ್‌ಗಳನ್ನೂ ಒದಗಿಸುವುದಾಗಿ ತಿಳಿಸಿದ್ದಾರೆ. ಅಭಿವೃದ್ಧಿ ರಾಷ್ಟ್ರಗಳೂ ಸೇರಿದಂತೆ ಜಾಗತಿಕವಾಗಿ ಅಗತ್ಯ ವೈದ್ಯಕೀಯ ಸಲಕರಣೆಗಳಿಗೆ ಕೊರತೆ ಉಂಟಾಗಿದೆ.
ಜಾಗತಿಕ ಸಾಂಕ್ರಾಮಿಕವಾಗಿರುವ ಕೊರೊನಾ ವೈರಸ್ ಸೋಂಕು ತಡೆಗೆ ಅವಶ್ಯಕ ಕ್ರಮಗಳಲ್ಲಿ ಕೈಜೋಡಿಸಲು ಜಾಕ್ ಮಾ ಫೌಂಡೇಶನ್ ಮತ್ತು ಅಲಿಬಾಬಾ ಫೌಂಡೇಶನ್ ಮುಂದಾಗಿವೆ. ಅಮೆರಿಕಕ್ಕೆ ಈಗಾಗಲೇ ತುರ್ತು ಪೂರೈಕೆಗಳ ದೇಣಿಗೆ ರವಾನಿಸಿದೆ. ಜಪಾನ್, ಇರಾನ್ ಹಾಗೂ ಇಟಲಿಯಲ್ಲೂ ವೈರಸ್ ಸೊಂಕು ಹರಡುವುದನ್ನು ತಪ್ಪಿಸಲು ಸಹಕರಿಸಿರುವ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್, ಆಫ್ರಿಕಾ ರಾಷ್ಟ್ರಗಳಿಗೂ ಮಾಸ್ಕ್ ಹಾಗೂ ಪರೀಕ್ಷಾ ಕಿಟ್‌ಗಳನ್ನು ಕಳುಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.