ADVERTISEMENT

ಸರಳ ಆಚರಣೆ | ಕ್ರಿಸ್‌ಮಸ್‌ ಸಂಭ್ರಮ ಕಸಿದ ಕೊರೊನಾ ವೈರಸ್‌

ಬೆತ್ಲೆಹೇಮ್‌ ಸೇರಿದಂತೆ ಎಲ್ಲೆಡೆ ಸರಳ ಆಚರಣೆ

ಏಜೆನ್ಸೀಸ್
Published 25 ಡಿಸೆಂಬರ್ 2020, 6:32 IST
Last Updated 25 ಡಿಸೆಂಬರ್ 2020, 6:32 IST
ಬೆತ್ಲೆಹೇಮ್‌ನ ಚರ್ಚ್‌ ಆಫ್‌ ನೇಟಿವಿಟಿಯಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಚರ್ಚ್‌ಅನ್ನು ಜೀಸಸ್‌ ಜನಿಸಿದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ   –ಎಎಫ್‌ಪಿ ಚಿತ್ರ
ಬೆತ್ಲೆಹೇಮ್‌ನ ಚರ್ಚ್‌ ಆಫ್‌ ನೇಟಿವಿಟಿಯಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಚರ್ಚ್‌ಅನ್ನು ಜೀಸಸ್‌ ಜನಿಸಿದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ   –ಎಎಫ್‌ಪಿ ಚಿತ್ರ   

ಬೆತ್ಲೆಹೇಮ್‌, ವೆಸ್ಟ್‌ ಬ್ಯಾಂಕ್‌ (ಎಪಿ): ಕೊರೊನಾ ವೈರಸ್‌ನಿಂದ ಸೋಂಕು ಹರಡುವುದನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್‌, ಈ ಬಾರಿ ಕ್ರಿಸ್‌ಮಸ್‌ ಸಂಭ್ರಮವನ್ನು ಕಸಿದಿದೆ.

ಜೀಸಸ್‌ನ ಜನ್ಮಸ್ಥಳವಾದ ಬೆತ್ಲೆಹೇಮ್‌ ನಗರದಲ್ಲಿನ ಕ್ರಿಸ್‌ಮಸ್‌ ಆಚರಣೆಯೂ ಇದಕ್ಕೆ ಹೊರತಾಗಿರಲಿಲ್ಲ. ಈ ಪವಿತ್ರ ನಗರದಲ್ಲಿ ಸಾಂಪ್ರದಾಯಿಕವಾಗಿ ಕ್ರಿಸ್‌ಮಸ್‌ ಆಚರಣೆ ನಡೆಯಿತು. ಕ್ರಿಸ್‌ಮಸ್‌ ಸಂದೇಶ ನೀಡಲು ವಾದ್ಯಮೇಳ ಸಮೇತ ಕ್ಯಾಥೋಲಿಕ್‌ ಧರ್ಮಗುರುಗಳು ಆಗಮಿಸಿದಾಗ, ನೆರೆದಿದ್ದ ಕೆಲವೇ ಜನರು ಅವರನ್ನು ಸ್ವಾಗತಿಸಿದರು.

ಜಗತ್ತಿನ ಅನೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಕಂಡು ಬಂತು. ಕ್ರಿಸ್‌ಮಸ್‌ ಮುನ್ನಾದಿನ ನಡೆಯುವ ಕ್ರಿಸ್‌ಮಸ್‌ ಈವ್‌ ಸಂದರ್ಭದಲ್ಲಿ ನಡೆಯುವ ಪ್ರಾರ್ಥನಾ ಸಭೆಗಳು ರದ್ದಾಗಿದ್ದವು. ಕೆಲವೆಡೆ ಈ ಸಭೆಗಳು ನಡೆದರೂ, ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಕುಟುಂಬದ ಸ್ನೇಹಿತರು, ಬಂಧು–ಬಾಂಧವರೊಂದಿಗೆ ಈವ್‌ ಆಚರಿಸುವುದರ ಮೇಲೂ ಕೊರೊನಾ ವೈರಸ್‌ನ ಆತಂಕದ ಛಾಯೆ ಆವರಿಸಿತ್ತು.

ADVERTISEMENT

ಆಸ್ಟ್ರೇಲಿಯಾದಲ್ಲಿ ಚರ್ಚ್‌ಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಮತ್ತಿತರ ಆಚರಣೆಗಳಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಬೇಕಾಗಿತ್ತು. ವ್ಯಕ್ತಿಗತ ಅಂತರ ಕಾಯ್ದುಕೊಂಡು ಈ ವಿಧಿಗಳನ್ನು ಆಚರಿಸಬೇಕು ಎನ್ನುವ ನಿರ್ಬಂಧದ ಕಾರಣ, ಕೆಲವೇ ಕಡಿಮೆ ಸಂಖ್ಯೆಯ ಜನರಿಗೆ ಅವಕಾಶ ಇತ್ತು.

ಫಿಲಿಪ್ಪೀನ್ಸ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿತ್ತು. ಕ್ರಿಸ್‌ಮಸ್‌ ಈವ್‌ ಅಂಗವಾಗಿ ನಡೆಯುವ ಭೋಜನಕೂಟಗಳಿಗೂ ಅವಕಾಶ ನಿರಾಕರಿಸಲಾಗಿತ್ತು. ಮಕ್ಕಳು ಮನೆ ಮನೆಗೆ ತೆರಳಿ ಕರೋಲ್‌ಗಳನ್ನು ಹಾಡಿ ಸಂಭ್ರಮಿಸಲು ಸಹ ಗ್ರೀಸ್‌ನಲ್ಲಿ ಅವಕಾಶ ಇರಲಿಲ್ಲ.

ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ಸಹ ಇದೇ ದೃಶ್ಯಗಳು ಕಂಡು ಬಂದವು. ಯುರೋಪ್‌ನ ಕೆಲವು ರಾಷ್ಡ್ರಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದ ಕಾರಣ, ಚರ್ಚ್‌ಗಳಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ಚರ್ಚ್‌ನ ಗಂಟೆಗಳು ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.