ADVERTISEMENT

ಸೂರ್ಯನ ಬಿಸಿಲು ಬಿದ್ದರೆ ಕೊರೊನಾ ವೈರಸ್‌ ನಾಶ: ಅಮೆರಿಕ ಸಂಶೋಧನೆ

ಏಜೆನ್ಸೀಸ್
Published 24 ಏಪ್ರಿಲ್ 2020, 7:19 IST
Last Updated 24 ಏಪ್ರಿಲ್ 2020, 7:19 IST
ಸೂರ್ಯನ ಬೆಳಕು
ಸೂರ್ಯನ ಬೆಳಕು    

ವಾಷಿಂಗ್ಟನ್‌: ಬಿಸಿಯಾದ ವಾತಾವರಣದಲ್ಲಿ ಕೊರೊನಾ ವೈರಸ್‌ ಬದುಕುಳಿಯುವ ಅವಕಾಶ ಕಡಿಮೆ ಇರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ.

ಶ್ವೇತ ಭವನದಲ್ಲಿ ಮಾತನಾಡಿವ ಅವರು, 'ಕೊರೊನಾ ವೈರಸ್‌ ಭಿನ್ನ ಉಷ್ಣಾಂಶ, ವಾತಾವರಣ ಹಾಗೂ ಮೇಲ್ಮೈ ಪ್ರದೇಶಗಳಲ್ಲಿ ವರ್ತಿಸುವ ಬಗ್ಗೆ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆ ವರದಿ ಪ್ರಕಟಿಸಿದೆ. ವೈರಸ್‌ ತಣ್ಣನೆಯ (ಕಡಿಮೆ ಉಷ್ಣಾಂಶ) ಹಾಗೂ ಒಣ ವಾತಾವರಣಗಳಲ್ಲಿ ಸುಲಭವಾಗಿ ಬದುಕುಳಿಯುತ್ತವೆ ಹಾಗೂ ಬಿಸಿ ವಾತಾವರಣದಲ್ಲಿ ಉಳಿಯುವ ಪ್ರಮಾಣ ಕಡಿಮೆ ಇರುತ್ತದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ' ಎಂದು ಟ್ರಂಪ್‌ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯದ ಮುಖ್ಯಸ್ಥರಾದ ಬಿಲ್‌ ಬ್ರಯಾನ್‌ ಸಂಶೋಧನೆಯ ಕುರಿತು ವಿವರಿಸುತ್ತ, 'ಸೂರ್ಯನ ಬೆಳಕು ಹಾಗೂ ತೇವಾಂಶವಿರುವ ವಾತಾವರಣದಲ್ಲಿ ಕೊರೊನಾ ವೈರಸ್‌ ಕ್ಷಿಪ್ರಗತಿಯಲ್ಲಿ ನಶಿಸಿ ಹೋಗುತ್ತವೆ' ಎಂದಿದ್ದಾರೆ.

ADVERTISEMENT

'ಐಸೊಪ್ರೊಪೈಲ್‌ ಆಲ್ಕೊಹಾಲ್‌ 30 ಸೆಕೆಂಡ್‌ಗಳಲ್ಲಿ ವೈರಸ್‌ ಸೋಂಕು ಮುಕ್ತಗೊಳಿಸುತ್ತದೆ. ನೇರವಾದ ಸೂರ್ಯನ ಬೆಳಕಿನಲ್ಲಿ ವೈರಸ್‌ ಬಹುಬೇಗ ನಾಶವಾಗುತ್ತದೆ. ಗಾಳಿಯಲ್ಲಿ ಹಾಗೂ ಯಾವುದೇ ವಸ್ತುಗಳ ಮೇಲ್ಪದರಲ್ಲಿರುವ ವೈರಸ್‌ ಸೂರ್ಯನ ಬೆಳಕಿನಿಂದಾಗಿ ಪ್ರಭಾವ ಕಳೆದುಕೊಳ್ಳುತ್ತದೆ. ಇದರೊಂದಿಗೆ ಉಷ್ಣಾಂಶ ಮತ್ತು ತೇವಾಂಶಯುತ ವಾತಾವರಣದಲ್ಲೂ ಇಂಥದ್ದೇ ಪ್ರಭಾವವನ್ನು ಗಮನಿಸಲಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದಂತೆ ವೈರಸ್‌ ಉಳಿಯುವಿಕೆ ಕಷ್ಟವಾಗುತ್ತದೆ' ಎಂದು ವಿವರಿಸಿದ್ದಾರೆ.

ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯ ಅಧ್ಯಯನ ಫಲಿತಾಂಶಗಳು ಇನ್ನೂ ಆರಂಭಿಕ ಹಂತದ್ದು ಎಂದೂ ಬ್ರಯಾನ್‌ ಹೇಳಿದ್ದಾರೆ.

ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಕೋವಿಡ್‌–19 ದೃಢಪಟ್ಟ ಒಟ್ಟು 26 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಮೆರಿಕದಲ್ಲೇ 8,60,000 ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 49,759 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.