ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್–19 ಪ್ರಭಾವ ತೀವ್ರವಾಗಿದ್ದ ಸಂದರ್ಭದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ಮಾಸ್ಕ್‌ಗಳು ನಕಲಿ ಹಾಗೂ ಕಳಪೆ ಗುಣಮಟ್ಟದ್ದು ಎಂದು ಆರೋಪಿಸಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿದೆ.
ಏಪ್ರಿಲ್‌ನಲ್ಲಿ ಚೀನಾದ ಕಂಪನಿ ಅಮೆರಿಕದ ಖರೀದಿದಾರರಿಗೆ ಪೂರೈಸಿರುವ ಎನ್95 ಮಾಸ್ಕ್‌ಗಳ ಪೈಕಿ ಸುಮಾರು 5 ಲಕ್ಷ ಮಾಸ್ಕ್‌ಗಳು ಕಳಪೆ ಗುಣಮಟ್ಟ ಹಾಗೂ ನಕಲಿ ಮಾಸ್ಕ್‌ಗಳು ಎಂದು ಆರೋಪಿಸಲಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಫೆಡೆರಲ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಗುಆಂಗ್‌ಡಾಂಗ್ ಮೂಲದ ಕಿಂಗ್ ಇಯರ್ ಪ್ಯಾಕೇಜಿಂಗ್ ಮತ್ತು ಪ್ರಿಂಟಿಂಗ್ ಮೂರು ಹಂತಗಳಲ್ಲಿ ಎನ್95 ಮಾಸ್ಕ್‌ಗಳನ್ನು ಕಳುಹಿಸಿರುವುದಾಗಿ ಹೇಳಲಾಗಿದೆ.
ಕೊರೊನಾ ವೈರಸ್ ಸೋಂಕಿನಿಂದ ವೈದ್ಯಕೀಯ ಸಿಬ್ಬಂದಿ ಹಾಗೂ ಇತರರಿಗೆ ರಕ್ಷಣೆಗಾಗಿ ಮಾಸ್ಕ್‌ಗಳನ್ನು ತರಿಸಲಾಗಿತ್ತು. 4,95,200 ಮಾಸ್ಕ್‌ಗಳು ಎನ್95 ಗುಣಮಟ್ಟ ಹೊಂದಿರುವುದಾಗಿ ನಕಲಿ ದೃಢತೆ ನೀಡಿದೆ. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಆಕ್ಯುಪೇಷನಲ್ ಸೇಫ್ಟಿ ಆ್ಯಂಡ್ ಹೆಲ್ತ್‌ನಿಂದ (NIOSH) ಪ್ರಮಾಣೀಕೃತ ಗೊಂಡಿರುವುದಾಗಿ ಚೀನಾ ಕಂಪನಿ ಸುಳ್ಳು ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಆಮದು ಮಾಡಿಕೊಂಡಿರುವವರು ಚೀನಾ ಕಂಪನಿಗೆ ಈಗಾಗಲೇ 1 ಮಿಲಿಯನ್ ಡಾಲರ್ ನೀಡಿದ್ದಾರೆ. ಅಮೆರಿಕದ ಪ್ರಜೆಗಳ ಸುರಕ್ಷತೆಗೆ ತೀವ್ರ ಹಾನಿಯಾಗಿರುವುದಾಗಿ ಆರೋಪಿಸಲಾಗಿದೆ. ಎಫ್‌ಬಿಐ ಕಳಪೆ ಮಾಸ್ಕ್ ಕುರಿತು ತನಿಖೆ ನಡೆಸಿದೆ.
ಚೀನಾ ಕಂಪನಿ ವಿರುದ್ಧ ನಾಲ್ಕು ದೋಷಾರೋಪಗಳನ್ನು ಹೊರಿಸಲಾಗಿದ್ದು, ಪ್ರತಿ ಆರೋಪಕ್ಕೆ 5,00,000 ಡಾಲರ್ ಅಥವಾ ಮಾಸ್ಕ್ ಮಾರಾಟದಿಂದ ಕಂಪನಿ ಗಳಿಸಿರುವ ಗಳಿಕೆಯ ದುಪ್ಪಟ್ಟು ದಂಡ ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.