ಅಂಟಾರ್ಕ್ಟಿಕಾ: ಕೊರೊನಾ ವೈರಸ್ ಮುಕ್ತ ವಿಶ್ವದ ಏಕೈಕ ಖಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಅಂಟಾರ್ಕ್ಟಿಕಾದಲ್ಲೂ ಈಗ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ.
ಚಿಲಿಯ ಸಂಶೋಧನಾ ನೆಲೆಯೊಂದರಲ್ಲಿ 36 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಚಿಲಿ ಮಿಲಿಟರಿಯ 26 ಸದಸ್ಯರು ಮತ್ತು ಅಂಟಾರ್ಕ್ಟಿಕಾ ಪೆನಿನ್ಸುಲಾದ ಜನರಲ್ ಬರ್ನಾರ್ಡೊ ಒ'ಹಿಗ್ಗಿನ್ಸ್‌ನೆಲೆಯಲ್ಲಿ ಬೀಡು ಬಿಟ್ಟಿರುವ 10 ನಿರ್ವಹಣಾ ಕಾರ್ಮಿಕರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಕೆಲವರಲ್ಲಿ ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿತ್ತು. ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಇವರು ವಾರಂತ್ಯದಲ್ಲಿ ಚಿಲಿಯ ನಗರವಾದ ಪುಂಟ ಅರೆನಾಸ್‌ನಿಂದ ಬೇಸ್‌ಗೆ ಸ್ಥಳಾಂತರಿಸಲ್ಪಟ್ಟ 60 ಜನರ ಗುಂಪಿನಲ್ಲಿದ್ದರು. ನಂತರ ಅವರನ್ನು ಪ್ರತ್ಯೇಕಿಸಲಾಗಿದ್ದು, ಸಂಪರ್ಕ ಪತ್ತೆ ಹಚ್ಚುವಿಕೆ ನಡೆಯುತ್ತಿದೆ.
ಜಗತ್ತಿನಲ್ಲಿ 7.83 ಕೋಟಿ ಮಂದಿಗೆ ಕೋವಿಡ್-19 ಸೋಂಕು ದೃಢ
ಏತನ್ಮಧ್ಯೆ ವರ್ಲ್ಡೊಮೀಟರ್ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 23 ಬುಧವಾರ ಬೆಳಗ್ಗೆಯ ವೇಳೆಗೆ ಜಗತ್ತಿನಲ್ಲಿ 7.83 ಕೋಟಿ ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಈ ವರೆಗೆ ಕೋವಿಡ್-19ನಿಂದಾಗಿ 17.24 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 5.51 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.
ಅತಿ ಹೆಚ್ಚು ಸೋಂಕು ಪ್ರಕರಣ ಹೊಂದಿರುವ ಅಮೆರಿಕದಲ್ಲಿ 1.86 ಕೋಟಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 1.0 ಕೋಟಿ, ಬ್ರೆಜಿಲ್‌ನಲ್ಲಿ 73.20 ಲಕ್ಷ, ರಷ್ಯಾದಲ್ಲಿ 29.06 ಲಕ್ಷ, ಫ್ರಾನ್ಸ್‌ನಲ್ಲಿ 24.90 ಲಕ್ಷ ಮತ್ತು ಬ್ರಿಟನ್‌ನಲ್ಲಿ 21.10 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿದೆ.
ಹಾಗೆಯೇ ಅಮೆರಿಕದಲ್ಲಿ 3.30 ಲಕ್ಷಕ್ಕೂ ಅಧಿಕ, ಭಾರತದಲ್ಲಿ 1.46 ಲಕ್ಷಕ್ಕೂ ಅಧಿಕ, ಬ್ರೆಜಿಲ್‌ನಲ್ಲಿ 1.88 ಲಕ್ಷಕ್ಕೂ ಅಧಿಕ, ರಷ್ಯಾದಲ್ಲಿ 51,912, ಫ್ರಾನ್ಸ್‌ನಲ್ಲಿ 61,702, ಬ್ರಿಟನ್‌ನಲ್ಲಿ 68,307 ಮತ್ತು ಇಟಲಿಯಲ್ಲಿ 69,842 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.