ಲಂಡನ್: ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಿಂದಲೇ ಹರಡಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬೇಹುಗಾರರು ಹೇಳಿದ್ದಾರೆ.
‘ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಯಿಂದ ವೈರಸ್ ಹರಡಿರುವ ಸಾಧ್ಯತೆ ಬಗ್ಗೆ ಬ್ರಿಟನ್ ಬೇಹುಗಾರರು ತನಿಖೆ ನಡೆಸುತ್ತಿರುವುದು ಬೀಜಿಂಗ್‌ನ ಉದ್ವಿಗ್ನತೆ ಹೆಚ್ಚಿಸಿದೆ ಎಂದು ‘ದಿ ಟೈಮ್ಸ್’ ವರದಿ ಮಾಡಿದೆ.
‘ಲ್ಯಾಬ್–ಲೀಕ್ (ಲ್ಯಾಬ್‌ನಿಂದ ಸೋರಿಕೆ)’ ಸಿದ್ಧಾಂತದ ಬಗ್ಗೆ ತನಿಖೆ ನಡೆಸಲು ಮುಂದಾಗುವ ವಿಜ್ಞಾನಿಗಳ ಧ್ವನಿ ಅಡಗಿಸಲಾಗುತ್ತಿದೆ ಎಂಬ ಆರೋಪಗಳೂ ಇವೆ. ಇದು ವಿವಾದಕ್ಕೆ ಕಾರಣವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.
2019ರ ಡಿಸೆಂಬರ್ 31ರಂದು ಕೊರೊನಾ ವೈರಸ್ ಹರಡಿರುವ ಬಗ್ಗೆ ಚೀನಾವು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಮಾಹಿತಿ ನೀಡಿತ್ತು.
ಬಳಿಕ ಇಡೀ ವರ್ಷ, ಕೊರೊನಾವೈರಸ್ ಮೂಲದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂಬ ಬೇಡಿಕೆಗಳ ಬಗ್ಗೆ ಚೀನಾ ಗಮನಹರಿಸಿರಲಿಲ್ಲ. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು.
ವುಹಾನ್‌ಗೆ ಮೊದಲು ಭೇಟಿ ನೀಡಿದ್ದ ಡಬ್ಲ್ಯುಎಚ್‌ಒ ತಂಡ ಕೂಡ ಮಾರುಕಟ್ಟೆಯಿಂದಲೇ ವೈರಸ್ ಹರಡಿದೆ ಎಂದು ಹೇಳಿತ್ತು. ಆದರೆ, ಬಳಿಕ ತನಿಖೆಯ ವಿಶ್ವಾಸಾರ್ಹತೆ ಮತ್ತು ಸಂಶೋಧನೆಗಳ ಸಿಂಧುತ್ವದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು.
ಇದೀಗ ವೈರಸ್ ಮೂಲದ ಬಗ್ಗೆ ತನಿಖೆಯಾಗಬೇಕೆಂದು ಮರಳಿ ಆಗ್ರಹ ವ್ಯಕ್ತವಾಗಿರುವುದು ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ‘ವುಹಾನ್ ಲ್ಯಾಬ್’ನಿಂದ ವೈರಸ್ ಹರಡಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕೆಂಬ ಆಗ್ರಹ ವಿಶ್ವದಾದ್ಯಂತ ವ್ಯಕ್ತವಾಗಿದೆ.
ಕೋವಿಡ್–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ ಈಚೆಗೆ ವರದಿ ಮಾಡಿತ್ತು. ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ‘ಲ್ಯಾಬ್–ಲೀಕ್ ಸಿದ್ಧಾಂತದ ವಾದ ಮುನ್ನೆಲೆಗೆ ಬಂದಿದೆ.
ವೈರಾಣುವಿನ ಮೂಲಕ್ಕೆ ಸಂಬಂಧಿಸಿದ ಗುಪ್ತಚರ ವರದಿಗಳನ್ನು ಬಹಿರಂಗಪಡಿಸಲು ತಾವು ಇಚ್ಛಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೆಲ ದಿನಗಳ ಹಿಂದೆ ಹೇಳಿದ್ದರು. ಈ ನಡೆಗೆ ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು. ಈ ಮಧ್ಯೆ, ಚೀನಾದ ಆರ್ಥಿಕ ಬೆಳವಣಿಗೆ, ಭೌಗೋಳಿಕ ರಾಜಕೀಯ ಹಸ್ತಕ್ಷೇಪ ವಿರುದ್ಧ ಎಲ್ಲ ರಾಷ್ಟ್ರಗಳು ಒಟ್ಟುಗೂಡಬೇಕು ಅಥವಾ ಬೀಜಿಂಗ್ ಅನ್ನು ಏಕಾಂಗಿಯನ್ನಾಗಿಸುವ ಮೂಲಕ ಪಾಠ ಕಲಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಸಹ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.