ಫ್ಲೋರಿಡಾ: ಕೊರೊನಾ ರೋಗದಿಂದ ಸಂಭವಿಸಬಹುದಾದ ಸಾವು ನೋವುಗಳನ್ನು ತಡೆಯುವಲ್ಲಿ ಕೋವಿಡ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎಂದು ಸಂಶೋಧನಾ ವರದಿ ತಿಳಿಸಿದೆ.
ಕೊರೊನಾ ತಡೆಗಟ್ಟಲು ನೀಡಲಾಗುತ್ತಿರುವ 8 ಲಸಿಕೆಗಳ ಪರಿಣಾಮಕಾರಿ ಕಾರ್ಯವೈಖರಿಯನ್ನು ಅಧ್ಯಯನ ನಡೆಸಿದ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಫಿಝರ್-ಬಯೋ ಎನ್ ಟೆಕ್ ಲಸಿಕೆಯು ಎರಡು ಅಪಾಯಕಾರಿ ಕೊರೊನಾ ವೈರಸ್ ರೂಪಾಂತರಗಳ ವಿರುದ್ಧ ಹೆಚ್ಚು ಪ್ರಬಲ ಹೋರಾಟ ನಡೆಸಬಲ್ಲದು ಎಂದಿದ್ದಾರೆ.
ಪೂರ್ಣ ಹಂತದ ಲಸಿಕೆಯನ್ನು ಪಡೆದರೆ ಕೋವಿಡ್ ವೈರಸ್‌ಗೆ ಸಂಬಂಧಿಸಿದ ರೋಗಳನ್ನು ಶೇ.85ರಷ್ಟು ತಡೆಯುವಷ್ಟು ಪರಿಣಾಮಕಾರಿಯಾಗಿದೆ. ರೋಗ ತೀವ್ರಗೊಳ್ಳದಂತೆ, ಆಸ್ಪತ್ರೆಗೆ ದಾಖಲಾದಂತೆ ಅಥವಾ ಸಾವು ಸಂಭವಿಸದಂತೆ ರಕ್ಷಣೆ ಒದಗಿಸಬಲ್ಲದು ಎಂದು ಅಧ್ಯಯನ ತಂಡದ ಸದಸ್ಯರು ತಿಳಿಸಿದ್ದಾರೆ. ಪತ್ರಿಕೆಗಳ ವರದಿ ಮತ್ತು ದತ್ತಾಂಶಗಳ ತುಲನೆಯಿಂದ ಕಲೆ ಹಾಕಿರುವ ವರದಿಯಿಂದ ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡಲು ಸಹಕಾರಿಯಾಗಲಿದೆ. ಲಸಿಕೆ ನೀಡುವ ವಿಚಾರವಾಗಿ ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ಅನುಕೂಲಕರವಾಗಿದೆ ಎಂದು ತಂಡದ ಸದಸ್ಯರಾದ ಜುಲಿಯಾ, ಶಾಪಿರೊ, ನಟಾಲಿ ಡೀನ್, ಇರಾ ಲೋಗಿನಿ ಮತ್ತಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೇಗವಾಗಿ ವ್ಯಾಪಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ತಡೆಯಲು ವಿಶ್ವದಾದ್ಯಂತ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದ್ದು, ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗದ ರಾಷ್ಟ್ರಗಳಿಗೆ ಪೂರೈಸುವ ಮೂಲಕ ರಾಷ್ಟ್ರಗಳ ನಡುವೆ ವ್ಯಾವಹಾರಿಕ ಸಂಬಂಧಗಳು ಪುನಃ ಆರಂಭಗೊಳ್ಳುತ್ತಿವೆ. ಶತಮಾನದ ವೈರಾಣು ರೋಗದ ವಿರುದ್ಧ ಹೋರಾಡಲು ದಾರಿ ಕಂಡುಕೊಳ್ಳುತ್ತಿವೆ. ಸಾರ್ಸ್ ಕೋವಿಡ್ 2 (SARS-CoV-2) ವೈರಸ್‌ನಿಂದ ರೂಪಾಂತರಗೊಳ್ಳುತ್ತಿರುವ ತಳಿಗಳಿಗೆ ತಡೆಯೊಡ್ಡಲು ಲಸಿಕೆಗಳು ಪರಿಣಾಮಕಾರಿ.
ಇಂಗ್ಲೆಂಡ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ನ ರೂಪಾಂತರಿ ಬಿ.1.17 ಸ್ಟ್ರೈನ್ ತಡೆಗೆ ಶೇ.86ರಷ್ಟು, ಬ್ರೆಜಿಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಕಾಣಿಸಿಕೊಂಡ ಪಿ.1 ಸ್ಟ್ರೈನ್ ತಡೆಗೆ ಶೇ.61, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಿ.1.351 ತಡೆಗೆ ಶೇ. 56ರಷ್ಟು ಲಸಿಕೆಗಳು ಪರಿಣಾಮಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ.
ಫಿಜರ್, ಮೊಡೆರ್ನಾ, ಜಾನ್ಸನ್ & ಜಾನ್ಸನ್, ಆಸ್ಟ್ರಾಜನಿಕಾ, ಸ್ಪುಟ್ನಿಕ್, ನೊವವ್ಯಾಕ್ಸ್, ಸಿನೊವಾಕ್ ಬಯೊಟೆಕ್ ಮತ್ತು ಸಿನೊಫಾರ್ಮ ಗ್ರೂಪ್ ಕಂಪನಿಗಳು ಉತ್ಪಾದಿಸಿರುವ ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿವೆ. ಇದರಿಂದ ಕೊರೊನಾ ವೈರಸ್ ಬಂದರೂ ತುರ್ತು ಪರಿಸ್ಥಿತಿ ಅಥವಾ ಸಾವು ಸಂಭವಿಸುವ ಸಂಖ್ಯೆ ತುಂಬ ಕಡಿಮೆ ಎಂಬುದನ್ನು ಫ್ಲೋರಿಡಾ ಅಧ್ಯಯನಕಾರರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.