ವಾಷಿಂಗ್ಟನ್:ಆಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನೀಡಲು ವಿವಿಧ ದೇಶಗಳು ನಿಗದಿಪಡಿಸಿರುವ ಕಾಲಮಿತಿಯಲ್ಲಿ ಭಾರಿ ವ್ಯತ್ಯಾಸವಿದೆ. ವಿಶ್ವದ 90ಕ್ಕೂ ಹೆಚ್ಚು ದೇಶಗಳು ಈ ಲಸಿಕೆಯನ್ನು ಬಳಸುತ್ತಿದ್ದವು. ಆದರೆ, ಲಸಿಕೆ ಪಡೆದವರಲ್ಲಿ ರಕ್ತಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡ ನಂತರ ಬಹುತೇಕ ರಾಷ್ಟ್ರಗಳು ಈ ಲಸಿಕೆ ಬಳಕೆಯನ್ನು ನಿಲ್ಲಿಸಿವೆ. ಭಾರತ, ಬ್ರಿಟನ್ ಮತ್ತು ಕೆಲವು ಐರೋಪ್ಯ ರಾಷ್ಟ್ರಗಳು ಮಾತ್ರವೇ ಈ ಲಸಿಕೆಯನ್ನು ಬಳಸುತ್ತಿವೆ. ಆದರೆ ಎರಡನೇ ಡೋಸ್ ಪಡೆಯಲು ಭಿನ್ನ ಕಾಲಮಿತಿಯನ್ನು ನಿಗದಿ ಮಾಡಿವೆ.
ಆರಂಭದಲ್ಲಿ ಎಲ್ಲಾ ದೇಶಗಳು ಮೊದಲ ಮತ್ತು ಎರಡನೇ ಡೋಸ್ ಮಧ್ಯೆ ನಾಲ್ಕು ವಾರಗಳ (28 ದಿನಗಳು) ಅಂತರ ನಿಗದಿ ಮಾಡಲಾಗಿತ್ತು. ಲಸಿಕೆ ಪಡೆದುಕೊಂಡವರಲ್ಲಿ ರಕ್ತಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡ ನಂತರ ಈ ಅಂತರವನ್ನು 6ರಿಂದ 8 ವಾರಕ್ಕೆ ವಿಸ್ತರಿಸಿದ್ದವು. ಭಾರತದಲ್ಲೂ ಇದೇ ಅಂತರವನ್ನು ಅನುಸರಿಸಲಾಯಿತು. ಲಸಿಕೆ ಕೊರತೆ ಆದ ಕಾರಣ ಮೇ ಮೊದಲ ವಾರದಿಂದ ಎರಡನೇ ಡೊಸ್ ಪಡೆಯುವವರಿಗೆ ಆದ್ಯತೆ ನೀಡಿ ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಆದರೆ ಮೇ ಎರಡನೇ ವಾರದಲ್ಲಿ ಈ ಅವಧಿಯನ್ನು 12ರಿಂದ 16 ವಾರಗಳಿಗೆ ವಿಸ್ತರಿಸಿದೆ.
ಆದರೆ, ಇದೇ ಅವಧಿಯಲ್ಲಿ ಬ್ರಿಟನ್ ಸರ್ಕಾರವು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯಲು 12-16 ವಾರಗಳ ಅಂತರವನ್ನು ನಿಗದಿ ಮಾಡಿತ್ತು. ಭಾರತದಲ್ಲಿ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆ ತೀವ್ರಗತಿ ಪಡೆದ ಕಾರಣ ಬ್ರಿಟನ್ ತನ್ನ ಲಸಿಕೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿತು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಬಿ.1.617.2 ರೂಪಾಂತರ ತಳಿಯು ಬ್ರಿಟನ್‌ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಯಿತು. ಇದರಿಂದಾಗಿ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ಅಂತರವನ್ನು 8 ವಾರಕ್ಕೆ ಇಳಿಸಲಾಗಿದೆ.
ಐರೋಪ್ಯ ಒಕ್ಕೂಟವು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ಅಂತರವನ್ನು 4ರಿಂದ 12 ವಾರಗಳಿಗೆ ನಿಗದಿ ಮಾಡಿದೆ. ಈ ನಿಗದಿತ ಅಂತರದಲ್ಲೇ ಒಕ್ಕೂಟದ ಸದಸ್ಯ ರಾಷ್ಟ್ರಗಳು ಲಸಿಕೆಯ ಎರಡನೇ ಡೋಸ್ ನೀಡುತ್ತಿವೆ. ಆದರೆ ಸ್ಪೇನ್ ಮಾತ್ರ ಈ ಅಂತರದ ಕಾಲಮಿತಿಯನ್ನು ಮೀರಿದೆ. ಎರಡನೇ ಡೋಸ್ ಪಡೆಯುವ ಅಂತರವನ್ನು 16 ವಾರಕ್ಕೆ ನಿಗದಿ ಮಾಡಿದೆ. ‘ಅವಧಿ ವಿಸ್ತರಣೆ ಮಾಡಿರುವುದರಿಂದ ಲಸಿಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಅನಿಷ್ಠಾನಕ್ಕೆ ತರಲು ಸಾಧ್ಯವಾಗಲಿದೆ’ ಎಂದು ಸ್ಪೇನ್ ಹೇಳಿದೆ.
ಡಬ್ಲ್ಯುಎಚ್‌ಒ ಹೇಳುವುದೇನು?
ಲಸಿಕೆ ನೀಡಿಕೆ ಕುರಿತ ಪ್ರಶ್ನೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಪ್ರಧಾನ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಉತ್ತರಿಸಿದ್ದಾರೆ. ‘ಜಗತ್ತಿನಲ್ಲಿ ಹಲವು ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ. ಡೋಸ್ ನೀಡಿಕೆಯಲ್ಲಿ ಎಲ್ಲವೂ ಭಿನ್ನ ಮಾದರಿ ಹೊಂದಿವೆ. ಬಹುತೇಕ ಲಸಿಕೆಗಳನ್ನು ಎರಡು ಡೋಸ್‌ಗಳಲ್ಲಿ ನೀಡಬೇಕು. ಒಂದೇ ಡೋಸ್‌ನ ಲಸಿಕೆಗಳೂ ಇವೆ. ಎರಡು ಲಸಿಕೆಗಳ ನಡುವಿನ ಅಂತರವನ್ನು ಆಯಾ ಲಸಿಕೆ ತಯಾರಿಕಾ ಕಂಪನಿಗಳು ಮತ್ತು ಸರ್ಕಾರಗಳು ನಿರ್ಣಯಿಸಬೇಕು’ ಎನ್ನುತ್ತಾರೆ ಅವರು.
‘ಪ್ರಸ್ತುತ ಎರಡು ಲಸಿಕೆಗಳ ನಡುವಿನ ಅಂತರ 3–4 ವಾರ ಇದೆ. ಆದರೆ ಎರಡನೇ ಲಸಿಕೆಯನ್ನು 12 ವಾರದ ಬಳಿಕ ನೀಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಸ್ಟ್ರಾಜೆನೆಕ ಕಂಪನಿ ಹೇಳಿಕೊಂಡಿದೆ. ಎರಡನೇ ಡೋಸ್ ಪಡೆಯುವುದು ತಪ್ಪಿಹೋಗಿದ್ದರೂ ಅಥವಾ ವಿಳಂಬವಾಗಿದ್ದರೂ ಅದನ್ನು ಪಡೆಯುವುದು ಸೂಕ್ತ. ನಿಗದಿತ ದಿನಾಂಕಕ್ಕಿಂತ ಮೊದಲು ಅಥವಾ ಕೆಲವು ದಿನ ಅಥವಾ ಒಂದೆರಡು ವಾರ ತಡವಾಗಿದ್ದರೂ ಪರವಾಗಿಲ್ಲ ಡೋಸ್ ಹಾಕಿಸಿಕೊಳ್ಳಬೇಕು’ ಎನ್ನುತ್ತಾರೆ ಡಾ. ಸೌಮ್ಯಾ.
‘ಮೊದಲ ಡೋಸ್ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರತಿಕಾಯಗಳನ್ನು ಒದಗಿಸಿದರೆ, ಎರಡನೇ ಡೋಸ್ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಉತ್ತೇಜಿಸುತ್ತದೆ. ಆದರೆ, ಯಾವ ಕಂಪನಿಯ ಮೊದಲ ಡೋಸ್ ಪಡೆಯಲಾಗುತ್ತದೆಯೋ, ಎರಡನೇ ಬಾರಿಯೂ ಅದೇ ಕಂಪನಿಯ ಡೋಸ್ ಪಡೆದುಕೊಳ್ಳಬೇಕು. ಎರಡು ಬೇರೆ ಬೇರೆ ಕಂಪನಿಗಳ ಡೋಸ್‌ಗಳನ್ನು ಪಡೆದುಕೊಳ್ಳಬಹುದು ಎಂದು ಶಿಫಾರಸು ಮಾಡುವ ದಾಖಲೆಗಳು ಲಭ್ಯವಿಲ್ಲ’ ಎಂದು ಸ್ವಾಮಿನಾಥನ್ ತಿಳಿಸಿದ್ದಾರೆ.
ಪ್ರತ್ಯೇಕ ಕಂಪನಿಗಳ ಡೋಸ್‌ಗಳನ್ನು ಪಡೆದುಕೊಳ್ಳುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಆದರೆ ಸದ್ಯದ ಪ್ರಕಾರ ಅದನ್ನು ಶಿಫಾರಸು ಮಾಡುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.