ವಲೆನ್ಸಿಯಾ: ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿಯಾಗಲು ರಾಜ ಆರನೇ ಫಿಲೀಪೆ ಹಾಗೂ ಅವರ ಪತ್ನಿ ರಾಣಿ ಲೆಟಿಜಿಯಾ ಅವರು ಪೈಪೋರ್ಥಾ ನಗರಕ್ಕೆ ಭಾನುವಾರ ಬಂದಿದ್ದರು. ಈ ವೇಳೆ ಅವರ ಮೇಲೆ ಸಂತ್ರಸ್ತರು ಕೆಸರು ಎರಚಿದ್ದಾರೆ. ‘ಇಲ್ಲಿಂದ ಹೊರ ನಡೆಯಿರಿ’, ‘ಕೊಲೆಗಡುಕರು’ ಎಂದು ಘೋಷಣೆ ಕೂಗಿದ್ದಾರೆ.
ಪ್ರವಾಹ ಸಂಭವಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ ಹಾಗೂ ರಾಣಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಒಟ್ಟು 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ಪೈಪೋರ್ಥಾ ನಗರವೊಂದರಲ್ಲಿಯೇ 60 ಮಂದಿ ಮೃತಪಟ್ಟಿದ್ದಾರೆ. ಸಂತ್ರಸ್ತರಿಗೆ ರಾಜ ಹಾಗೂ ರಾಣಿ ಅವರಿಗಿಂತ ಪ್ರಧಾನಿ ಪೆದ್ರೊ ಸ್ಯಾಂಚೆಸ್ ಅವರ ಮೇಲೆಯೇ ಹೆಚ್ಚು ಆಕ್ರೋಶವಿದೆ ಎನ್ನಲಾಗುತ್ತಿದೆ.
ಪ್ರವಾಹದ ಬಳಿಕ ಸರ್ಕಾರವು ಪರಿಹಾರ ಹಾಗೂ ಸಂತ್ರಸ್ತರಿಗೆ ನೆರವು ನೀಡುವ ಕುರಿತು ನಿರ್ಲಕ್ಷ್ಯ ಧೋರಣೆ ತೋರಿದೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ರಾಜ ಹಾಗೂ ರಾಣಿಯ ಮೇಲೆ ಜನರು ಕೆಸರು ಎರೆಚಿದ್ದಾರೆ. ಇವರೊಂದಿಗೆ ಬಂದಿದ್ದ ಹಲವು ಅಧಿಕಾರಿಗಳ ಮೇಲೆಯೂ ಸಾರ್ವಜನಿಕರು ಕೆಸರು ಎರೆಚಿದ್ದಾರೆ.
ಈ ಮಧ್ಯೆಯು ಇಬ್ಬರು ಸಂತ್ರಸ್ತರನ್ನು ಮಾತನಾಡಿಸಲು ಯತ್ನಿಸಿದರು. ಭದ್ರತಾ ಪಡೆಗಳು ಕೊಡೆ ಹಿಡಿದು ಇಬ್ಬರನ್ನು ರಕ್ಷಿಸಿದರು. ಬಳಿಕ ತಮ್ಮ ಭೇಟಿಯನ್ನು ರಾಜ ಹಾಗೂ ರಾಣಿ ಮೊಟಕುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.