ವಾಷಿಂಗ್ಟನ್:ಮಂಗಳ ಗ್ರಹದೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ’ಕ್ಯೂರಿಯಾಸಿಟಿ’ ರೋವರ್ ಬಾಹ್ಯಾಕಾಶ ನೌಕೆ, ಆ ಚಿತ್ರಗಳನ್ನು ನಾಸಾಗೆ ರವಾನಿಸಿದೆ. ಮಂಗಳನ ಬೆಟ್ಟ ಪ್ರದೇಶದ (ವೆರಾ ರುಬಿನ್ ರಿಡ್ಜ್) ಮೇಲೆ ಕ್ಯೂರಿಯಾಸಿಟಿ ತೆಗೆದಿರುವ ಕೊನೆಯ ಸೆಲ್ಫಿ ಇದು.
ಜನವರಿ 15ರಂದು ‘ರಾಕ್ ಹಾಲ್’ ಎಂದು ಕರೆಯಲಾಗುವ ಈ ಪ್ರದೇಶದ ಚಿತ್ರವನ್ನು ನೌಕೆಯು ಸೆರೆ ಹಿಡಿದಿದೆ. ಈ ಬೆಟ್ಟದ ಭಾಗದಲ್ಲಿ ಚಿತ್ರಗಳನ್ನು ನಾಸಾಗೆ ರವಾನಿಸಿದ ನಂತರ, ಬೆಟ್ಟವನ್ನು ಕೊರೆದು ಕೆಳಗೆ ಇಳಿದಿರುವ ಕ್ಯೂರಿಯಾಸಿಟಿ ರೋವರ್, ಮಣ್ಣಿರುವ ಪ್ರದೇಶದತ್ತ ಇಳಿಯುತ್ತಿದೆ ಎಂದು ನಾಸಾ ತಿಳಿಸಿದೆ.
ತನ್ನ ರೊಬೊ ಕೈಯನ್ನು ಬಳಸಿಕೊಂಡು ನೌಕೆಯು ಈ ಸೆಲ್ಫಿಯನ್ನು ತೆಗೆದುಕೊಂಡಿದೆ. 57 ಸರಣಿ ಚಿತ್ರಗಳನ್ನು ‘ಕ್ಯೂರಿಯಾಸಿಟಿ’ ಸೆರೆ ಹಿಡಿದಿದೆ. ರೋವರ್‌ನ ಎಡಗಡೆಯ ಕೆಳ ಭಾಗದಲ್ಲಿ ‘ರಾಕ್ ಹಾಲ್’ ಅನ್ನು ಕೊರೆದಿರುವ ದೃಶ್ಯ ಈ ಚಿತ್ರಗಳಲ್ಲಿ ಸೆರೆಯಾಗಿದೆ. ಗ್ರಹವು ಸಾಮಾನ್ಯಕ್ಕಿಂತ ಹೆಚ್ಚು ದೂಳಿನಿಂದ ಕೂಡಿರುವುದು ಈ ಚಿತ್ರಗಳಲ್ಲಿ ಕಂಡು ಬರುತ್ತಿದೆ ಎಂದು ನಾಸಾ ಹೇಳಿದೆ.
ಗ್ರಹದಲ್ಲಿನ ಬೆಟ್ಟ ಭಾಗವನ್ನು 2017ರ ಸೆಪ್ಟೆಂಬರ್‌ನಿಂದ ಕ್ಯೂರಿಯಾಸಿಟಿ ರೋವರ್ ಕೊರೆಯುತ್ತಿದೆ. ಬೆಟ್ಟ ಭಾಗದಿಂದ ಈಗ ಮಣ್ಣಿನ ಪ್ರದೇಶಕ್ಕೆ ಅದು ಇಳಿಯುತ್ತಿರುವುದರಿಂದ, ಇಲ್ಲಿ ಸಿಗಲಿರುವ ಖನಿಜಗಳು ಗ್ರಹದಲ್ಲಿ ಪ್ರಾಚೀನ ಕೆರೆಗಳಿದ್ದವು ಎಂಬುದರ ಬಗ್ಗೆ ಸುಳಿವು ನೀಡಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಕ್ಯೂರಿಯಾಸಿಟಿ ರೋವರ್ ಮಂಗಳನ ಅಂಗಳ ಪ್ರವೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.