ಮಾಸ್ಕೊ/ವಾರ್ಸಾ/ ಪಕ್ರೋಸ್ಕ್ (ಎಪಿ/ಎಎಫ್‌ಪಿ):ರೂಬಲ್‌ಗಳಲ್ಲಿ ಹಣ ಪಾವತಿಸಲು ವಿಫಲವಾದ ಕಾರಣಕ್ಕೆ ಐರೋಪ್ಯ ಒಕ್ಕೂಟದ ಪೋಲೆಂಡ್ ಮತ್ತು ಬಲ್ಗೇರಿಯಾ ದೇಶಗಳಿಗೆ ರಷ್ಯಾದ ಸರ್ಕಾರಿ ಸ್ವಾಮ್ಯದ ಇಂಧನ ದೈತ್ಯ ಕಂಪನಿ ಗ್ಯಾಜ್‌ಪ್ರೋಮ್ ಬುಧವಾರದಿಂದಲೇ ನೈಸರ್ಗಿಕ ಅನಿಲ ಸರಬರಾಜು ಸ್ಥಗಿತಗೊಳಿಸಿದೆ.
ಉಕ್ರೇನ್ ಮೇಲಿನ ಆಕ್ರಮಣ ವಿರೋಧಿಸಿ ಐರೋಪ್ಯ ಒಕ್ಕೂಟ ರಷ್ಯಾದ ಮೇಲೆ ಹೇರಿದ್ದ ಆರ್ಥಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ ಗ್ಯಾಜ್‌ಪ್ರೋಮ್ ಈ ಕ್ರಮ ತೆಗೆದುಕೊಂಡಿದೆ.
‘ರಷ್ಯಾ ನೈಸರ್ಗಿಕ ಅನಿಲ ಕುರಿತಂತೆ ಬೆದರಿಕೆ ತಂತ್ರ (ಬ್ಲ್ಯಾಕ್‌ಮೇಲ್) ಅನುಸರಿಸುತ್ತಿದೆ’ ಎಂದು ಪೋಲೆಂಡ್, ಬಲ್ಗೇರಿಯಾ ಆರೋಪಿಸಿವೆ.
ನೈಸರ್ಗಿಕ ಅನಿಲ ಖರೀದಿಗೆ ಡಾಲರ್ ಬದಲು, ರೂಬಲ್‌ನಲ್ಲಿ ಪಾವತಿಸುವ ಹೊಸ ವಿಧಾನವು ಆರ್ಥಿಕ ವಲಯದಲ್ಲಿ ಅಭೂತಪೂರ್ವ ಸ್ನೇಹಿ ವ್ಯವಸ್ಥೆಯಾಗಿದೆ. ಇದನ್ನು ವಿರೋಧಿಸುವವರನ್ನು
ಸ್ನೇಹಪರವಲ್ಲದದೇಶಗಳೆಂದು ಪರಿಗಣಿಸಿ, ಇಂತಹ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ’ ಎಂದು ಪುಟಿನ್ ಆಡಳಿತ ಕಚೇರಿ ಕ್ರೆಮ್ಲಿನ್ ವಕ್ತಾರ ಡೆಮಿಟ್ರಿ ಪೆಸ್ಕೊವ್ ತಿಳಿಸಿದರು.
ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವನ್ ಡೆರ್ ಲೆಯೆನ್ ಅವರು, ‘ನೈಸರ್ಗಿಕ ಅನಿಲದಿಂದ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ರಷ್ಯಾದ ಮತ್ತೊಂದು ಪ್ರಯತ್ನವಿದು. ಇದು ಅಸಮರ್ಥನೀಯ’ ಎಂಬ ಆರೋಪಕ್ಕೆ ತಿರುಗೇಟು ನೀಡಿರುವಪೆಸ್ಕೊವ್, ‘ನಿಮಗೆ ತಿಳಿದಿರುವಂತೆ, ಅವರನ್ನು ನಿರ್ಬಂಧಿಸಲಾಗಿದೆ. ಸರಳವಾಗಿ ಹೇಳುವುದಾದರೆ ನಮಗೆ ಮೀಸಲಾಗಿದ್ದ ಸಂಪನ್ಮೂಲದಲ್ಲಿ ಗಣನೀಯ ಪ್ರಮಾಣದಷ್ಟು
ಕದ್ದಿದ್ದಾರೆ. ಇದು ಹೊಸ ಪಾವತಿ ವ್ಯವಸ್ಥೆಯ ಪರಿವರ್ತನೆಗೆ ಕಾರಣ. ಇದರಲ್ಲಿ ‘ಬ್ಲ್ಯಾಕ್‌ಮೇಲ್’ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.
ಅಧ್ಯಕ್ಷ ಪುಟಿನ್ ಅವರು ಕಳೆದ ತಿಂಗಳೇ, ‘ಅನಿಲ ಖರೀದಿಸಲು ಸ್ನೇಹಪರವಲ್ಲದ ದೇಶಗಳು ರೂಬಲ್ ಖಾತೆಗಳನ್ನು ತೆರೆಯಬೇಕು, ಇಲ್ಲವೇ ಅವರ ಅನಿಲ ಕೊಳಾಯಿಗಳು ಬಂದ್ ಆಗಲಿವೆ’ ಎಂದುಎಚ್ಚರಿಕೆ
ನೀಡಿದ್ದರು.
ಉಕ್ರೇನ್‌ನಲ್ಲಿನ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ರಷ್ಯಾ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ಭಾರಿ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ವಿದೇಶದಲ್ಲಿ ಇರಿಸಿದ್ದ ರಷ್ಯಾದ ವಿದೇಶಿ ಮೀಸಲು
ಹಣ ಸುಮಾರು ₹ 22.80 ಲಕ್ಷ ಕೋಟಿ ಮುಟ್ಟುಗೋಲಿಗೆ ಒಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.