ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ಪಡೆಯತ್ತ ಒಂದೇ ಬೆರಳು ಮೇಲಕ್ಕೆತ್ತಿ ತೋರಿಸಿ, ಉದ್ಯೋಗ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಸ್ಥಳೀಯ ಆಡಳಿತಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, 52 ವರ್ಷದ ಜೂಲಿ ಬ್ರಿಸ್ಕ್‌ಮನ್ ಈ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಅವರು ವರ್ಜಿನಿಯಾ ರಾಜ್ಯದ ಅಲ್ಗೊಂಕಿಯಾನ್ ಜಿಲ್ಲೆಯ ‘ಲಾಡನ್ ಕೌಂಟಿ ಬೋರ್ಡ್ ಆಫ್ ಸುಪರ್‌ವೈಜರ್ಸ್’ಗೆ ನಡೆದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಸುಜಾನ್ ವೋಲ್ಪ್ ಅವರನ್ನು ಸೋಲಿಸಿದ್ದಾರೆ.
2017ರಲ್ಲಿ, ಬೈಕ್‌ಗಳಿದ್ದ ಬೆಂಗಾವಲು ಪಡೆ ಟ್ರಂಪ್ ಅವರನ್ನು ಹಿಂಬಾಲಿಸುತ್ತಿದ್ದ ವೇಳೆ ಜೂಲಿ ಅವರು ಪಡೆಯತ್ತ ಬೆರಳು ತೋರುವುದನ್ನು ಎಎಫ್‌ಪಿ ಸುದ್ದಿಸಂಸ್ಥೆ ಸೆರೆ ಹಿಡಿದಿತ್ತು. ಕೆಲವೇ ದಿನಗಳಲ್ಲಿ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಟ್ರಂಪ್ ಆಡಳಿತದ ಕೋಪಕ್ಕೆ ಗುರಿಯಾಗಿದ್ದ ಜೂಲಿ, ಅಮೆರಿಕದ ಮಿಲಿಟರಿ ಸಬ್ ಕಾಂಟ್ರ್ಯಾಕ್ಟರ್ ಕಚೇರಿಯಲ್ಲಿ ಮಾರ್ಕೆಟಿಂಗ್ ಅನಲಿಸ್ಟ್ ಹುದ್ದೆಯನ್ನೇ ಕಳೆದುಕೊಳ್ಳುತ್ತಾರೆ.
ನಂತರ ಅವರು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುತ್ತಾರೆ. ‘ಕೆಲಸ ಕಳೆದುಕೊಂಡ ನಂತರ ನನಗೆ ಸಾಕಷ್ಟು ಅವಕಾಶಗಳು ಲಭಿಸಿದವು’ ಎಂದು ಪ್ರಚಾರ ಮಾಡಿದರು.
‘ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ನಿರ್ಧಾರಕ್ಕೆ ಮಂಗಳವಾರ ನನಗೆ ಪ್ರತಿಫಲ ದೊರೆತಿದೆ’ ಎಂದು ಟ್ವೀಟ್ ಮಾಡಿರುವ ಜೂಲಿ, ವಿವಾದ ಸೃಷ್ಟಿಸಿ, ಕೆಲಸ ಕಳೆಯಲು ಕಾರಣವಾಗಿದ್ದ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.