ADVERTISEMENT

ಮೋಕಾ ಚಂಡಮಾರುತ; ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಆತಂಕ

ರಾಯಿಟರ್ಸ್
Published 14 ಮೇ 2023, 16:20 IST
Last Updated 14 ಮೇ 2023, 16:20 IST
ಕಾಕ್ಸ್‌ಬಜಾರ್‌ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರ (ರಾಯಿರ್ಟಸ್‌ ಚಿತ್ರ)
ಕಾಕ್ಸ್‌ಬಜಾರ್‌ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರ (ರಾಯಿರ್ಟಸ್‌ ಚಿತ್ರ)   

ಡಾಕಾ: ಮೋಕಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮ್ಯಾನ್ಮಾರ್‌–ಬಾಂಗ್ಲಾದೇಶ ಕರಾವಳಿಗೆ ಭಾನುವಾರ ಅಪ್ಪಳಿಸಿದೆ. ಇನ್ನೊಂದೆಡೆ ಮ್ಯಾನ್ಮಾರ್‌ನ ಕರಾವಳಿಯಲ್ಲಿರುವ ಕಾಕ್ಸ್‌ ಬಜಾರ್‌ ನಗರದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಈ ಚಂಡಮಾರುತವು ತೀವ್ರ ಹಾನಿ ಉಂಟು ಮಾಡುವ ಸಾಧ್ಯತೆ ಇದೆ.

‘ಬಿದಿರು ಹಾಗೂ ಟಾರ್ಪಲ್‌ನಿಂದ ನಾವು ಮನೆ ಕಟ್ಟಿಕೊಂಡಿದ್ದೇವೆ. ಗಾಳಿಯು ಶಕ್ತಿಯುತವಾಗುತ್ತಲೇ ಇದೆ. ನಾವು ಮನೆಯೊಳಗೆ ಬಂದಿಯಾಗಿದ್ದೇವೆ. ನಮ್ಮನ್ನು ರಕ್ಷಿಸುವಂತೆ ಭಗವಂತನಲ್ಲಿ ಕೇಳಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ 21 ವರ್ಷದ ಮೊಹಮ್ಮದ್‌ ಅಜೀಜ್‌.

ಕಾಕ್ಸ್‌ ಬಜಾರ್‌ನಲ್ಲಿರುವ ಈ ನಿರಾಶ್ರಿತ ಕೇಂದ್ರವು ಜಗತ್ತಿನ ಅತಿದೊಡ್ಡ ನಿರಾಶ್ರಿತರ ಕೇಂದ್ರವಾಗಿದೆ. ಇಲ್ಲಿ ಸುಮಾರು 10 ಲಕ್ಷದಷ್ಟು ರೋಹಿಂಗ್ಯಾ ನಿರಾಶ್ರಿತರು ವಾಸವಿದ್ದಾರೆ.

ADVERTISEMENT

‘ಈ ನಿರಾಶ್ರಿತರ ಶಿಬಿರಗಳಲ್ಲಿ ಇರುವವರನ್ನು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಬೇರೆಡೆ ಸ್ಥಳಾಂತರಿಸಲಾಗಿದೆ. ಜೊತೆಗೆ, ನಮಗೆ ಸರಿಯಾದ ಊಟದ ವ್ಯವಸ್ಥೆಯನ್ನೂ ಮಾಡುತ್ತಿಲ್ಲ. ಜನರು ಹಸಿವಿನಿಂದ ಬಳಲುತ್ತಿದ್ದಾರೆ’ ಎನ್ನುತ್ತಾರೆ ಶಿಬಿರಗಳಲ್ಲಿ ಇರುವ ಜ್ವಾನ್‌ ಮಿನ್‌ ಟನ್‌.

‘ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ ಅನ್ನು ಇಬ್ಭಾಗ ಮಾಡುವ ನಾಫ್‌ ನದಿ ತೀರಕ್ಕೆ ಚಂಡಮಾರುತ ಅಪ್ಪಳಿಸುವ ಮೊದಲು ಬಾಂಗ್ಲಾದೇಶದ ಟೆಕ್ನಾಫ್‌ ತೀರಕ್ಕೆ ಮಧ್ಯಾಹ್ನವೇ ಬಂದು ಅಪ್ಪಳಿಸಿತ್ತು’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಚಂಡಮಾರುತವು ಗಂಟೆಗೆ 200 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಜೊತೆಗೆ,  ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದು ಹೆಚ್ಚಿನ ಹಾನಿಗೆ ಕಾರಣವಾಗಬಹುದು. ಈಗಾಗಲೇ, ನಾಫ್‌ ನದಿಯಲ್ಲಿ ದೊಡ್ಡ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ’ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.