ಪ್ಯಾರಿಸ್: ಕಮ್ಯುನಿಸ್ಟ್ ಜೆಕೊಸ್ಲೊವಾಕಿಯಾದ ಕುರಿತ ವಿಮರ್ಶಾತ್ಮಕ ಬರಹಗಳ ಮೂಲಕ, ದೇಶದಿಂದ ಹೊರಬಿದ್ದು ಫ್ರಾನ್ಸ್‌ನಲ್ಲಿ ನೆಲೆನಿಂತಿದ್ದ ಬರಹಗಾರ ಮಿಲನ್ ಕುಂದರಾ ಅವರು ತಮ್ಮ 94ನೇ ವಯಸ್ಸಿನಲ್ಲಿ ಪ್ಯಾರಿಸ್‌ನಲ್ಲಿ ನಿಧನರಾಗಿದ್ದಾರೆ.
1929ರ ಏಪ್ರಿಲ್ 1ರಂದು ಜನಿಸಿದ್ದ ಕುಂದರಾ ಬ್ರನೋದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದಿದ್ದರು. ಸಾಹಿತ್ಯ, ವಿಜ್ಞಾನ ಮತ್ತು ಚಿತ್ರಕಥೆ ಅಧ್ಯಯನಕ್ಕಾಗಿ ಪ್ರೇಗ್‌ಗೆ ತೆರಳಿದ್ದರು. ಅವರ ಮೊದಲ ಕಾದಂಬರಿ ‘ದಿ ಜೋಕ್’. ಆದರೆ, ‘ದಿ ಅನ್‌ಬೇರಬಲ್ ಲೈಟ್‌ನೆಸ್ ಆಫ್ ಬೀಯಿಂಗ್,’ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. 1988ರಲ್ಲಿ ಈ ಕಾದಂಬರಿ ಸಿನಿಮಾ ಕೂಡ ಆಗಿದೆ.
ಪ್ರೀತಿ ಮತ್ತು ಗಡಿಪಾರು, ರಾಜಕೀಯ ಮತ್ತು ಆಳವಾದ ವೈಯಕ್ತಿಕ ವಿಷಯಗಳನ್ನು ಒಟ್ಟೊಟ್ಟಿಗೆ ಬೆಸೆದಿದ್ದ ಕುಂದಾರ ಅವರ ಕಾದಂಬರಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತ್ತು. ಅವರ ಕೃತಿಗಳಲ್ಲಿ ವ್ಯಕ್ತವಾಗುತ್ತಿದ್ದ ಸೋವಿಯತ್ ವಿರೋಧಿ ನಿಲುವು ಮತ್ತು ಕಾಮಪ್ರಚೋದಕತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅವರಿಗೆ ವ್ಯಾಪಕ ಓದುಗ ಬಳಗವನ್ನು ಸೃಷ್ಟಿ ಮಾಡಿತ್ತು.
ಅವರ ಕೊನೆ ಕೃತಿ ಫ್ರೆಂಚ್ ಭಾಷೆಯಲ್ಲಿತ್ತಾದರೂ, ಅದು ಜೆಕ್ ಭಾಷೆಗೆ ಭಾಷಾಂತರಗೊಳ್ಳಲೇ ಇಲ್ಲ.
1975ರಲ್ಲಿ ಕಮ್ಯುನಿಸ್ಟ್ ಆಳ್ವಿಕೆಯ ಜೆಕೊಸ್ಲೊವಾಕಿಯಾದಿಂದ ಹೊರಬಂದಿದ್ದ ಅವರು, ಈ ವರೆಗೆ ಫ್ರಾನ್ಸ್‌ನಲ್ಲೇ ನೆಲೆನಿಂತಿದ್ದರು. 1981ರಲ್ಲಿ ಅವರಿಗೆ ಫ್ರಾನ್ಸ್ ಪೌರತ್ವ ಸಿಕ್ಕಿತ್ತು.
ಮಾನವನ ಪರಿಸ್ಥಿತಿಗೆ ಸಂಬಂಧಿಸಿದ ಕಾದಂಬರಿಗಳಿಗೆ ಅವರು ಹೆಸರಾಗಿದ್ದರು. ಭಿನ್ನಾಭಿಪ್ರಾಯದ ಕಾರಣಕ್ಕೆ ಜೆಕ್ ಪೌರತ್ವ ಕಳೆದುಕೊಂಡಿದ್ದ ಅವರು, ತಮ್ಮ ಕೃತಿಗಳಲ್ಲಿ ಅದರ ಬಗೆಗಿನ ಅಸಮಾಧಾನವನ್ನು ಸದಾ ವ್ಯಕ್ತಪಡಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.