ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಪೊಲೀಸರಿಂದ ಭದ್ರತೆಯ ಕೋಟೆ ನಿರ್ಮಾಣ ಮಾಡಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಟ್ಯಾಂಕ್‌ಗಳನ್ನು ಸಹ ನಿಯೋಜಿಸಲಾಗಿದೆ. ಹಲವು ಪ್ರಮುಖ ಮಾರ್ಗಗಳಲ್ಲಿ ಕ್ರಾಂಕೀಟ್ ತಡೆಗಳನ್ನು ನಿರ್ಮಿಸಲಾಗಿದೆ. ಅಮೆರಿಕ ಸಂಸತ್ ಭವನದ ಸುತ್ತ ಬೇಲಿಯನ್ನು ಹಾಕಲಾಗಿದೆ.
‘ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳ ಮೇಲೆಯೂ ಪೊಲೀಸರು ನಿಗಾವಹಿಸಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಹ್ಯ ಬೆದರಿಕೆಯ ಜತೆಗೆ ಆಂತರಿಕವಾಗಿಯೂ ದಾಳಿ ಮತ್ತು ಹಿಂಸಾಚಾರ ನಡೆಸುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ, ಯಾವುದೇ ರೀತಿಯ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಬೆದರಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಳನುಸುಳುವ ಕುರಿತು ಆನ್‌ಲೈನ್‌ನಲ್ಲಿ ನಡೆದಿರುವ ಕಾಮೆಂಟ್‌ಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಎಫ್‌ಬಿಐ ಸೂಚನೆ ಮೇರೆಗೆ ರಾಷ್ಟ್ರೀಯ ಭದ್ರತಾ ಪಡೆಯ 12 ಮಂದಿಯನ್ನು ಭದ್ರತಾ ವ್ಯವಸ್ಥೆಯಿಂದ ತೆಗೆದುಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ. ಈ ಬಗ್ಗೆ ರಕ್ಷಣಾ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.