ಡೀರ್ ಅಲ್ ಬಲಾಹ್(ಗಾಜಾ ಪಟ್ಟಿ): ಇಸ್ರೇಲ್ ಪಡೆಗಳು ಕೇಂದ್ರೀಯ ಗಾಜಾ ಪಟ್ಟಿ ಹಾಗೂ ಲೆಬನಾನ್ ಮೇಲೆ ದಾಳಿ ಮುಂದುವರಿಸಿದ್ದು, ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಗಾಜಾ ಪಟ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಮೃತರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಸತ್ತವರ ಸಂಖ್ಯೆ 25ಕ್ಕೆ ಏರಿಕೆಯಾದಂತಾಗಿದೆ.
ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರೀಯ ಗಾಜಾ ಪಟ್ಟಿಯ ನಸೀರತ್ ನಿರಾಶ್ರಿತರ ಶಿಬಿರದ ಮೇಲೆ ಗುರುವಾರ ಇಸ್ರೇಲ್ ಪಡೆಗಳು ನಡೆಸಿದ್ದ ಎರಡು ವೈಮಾನಿಕ ದಾಳಿಗಳಲ್ಲಿ 16 ಮಂದಿ ಮೃತಪಟ್ಟಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿದ್ದವು.
ಮೃತದೇಹಗಳು ಪತ್ತೆಯಾಗುತ್ತಿದ್ದು, ಸತ್ತವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಲ್–ಅಕ್ಸಾ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಹಮಾಸ್‌ನ ಮೂಲಸೌಕರ್ಯಗಳನ್ನು ಹಾಗೂ ನಸೀರತ್ ಪ್ರದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಬಂಡುಕೋರನ ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಇಸ್ರೇಲ್ ಸೇನೆ ಹೇಳಿದೆ. ತಾನು ನಡೆಸಿದ ದಾಳಿಯಲ್ಲಿ ಕೆಲ ನಾಗರಿಕರು ಮೃತಪಟ್ಟಿರುವ ಕುರಿತು ಮಾಹಿತಿ ಇದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.