ADVERTISEMENT

ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

ಪಿಟಿಐ
Published 2 ಮೇ 2024, 13:04 IST
Last Updated 2 ಮೇ 2024, 13:04 IST
<div class="paragraphs"><p>ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿರುವ ಹೆದ್ದಾರಿ ಬುಧವಾರ ಕುಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ</p></div>

ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿರುವ ಹೆದ್ದಾರಿ ಬುಧವಾರ ಕುಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ

   

ಪಿಟಿಐ ಚಿತ್ರ

ಬೀಜಿಂಗ್: ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ADVERTISEMENT

ಮಿಜೌ–ದಾಬು ಎಕ್ಸ್‌ಪ್ರೆಸ್‌ವೇನಲ್ಲಿ 58 ಅಡಿ ಉದ್ದದಷ್ಟು ಭಾಗ ಕುಸಿದಿದ್ದರಿಂದ 20 ಕಾರುಗಳು ಉರುಳಿ ಬಿದ್ದಿರುವುದಾಗಿ ಪ್ರಾಂತ್ಯದ ಮಿಜೌ ನಗರದಲ್ಲಿರುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಷಿನ್‌ಹುವಾ ನ್ಯೂಸ್‌ ವರದಿ ಮಾಡಿದೆ.

ಹೆದ್ದಾರಿಯ ಭಾಗವೊಂದು ಕುಸಿದಿರುವ ಕುರಿತ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವಘಡದ ಪರಿಣಾಮ ಕೆಲವು ವಾಹನಗಳು ಹೊತ್ತಿ ಉರಿದಿವೆ. ಸುಟ್ಟು ಕರಕಲಾದ ಕಾರುಗಳ ಚಿತ್ರಗಳು ಸಹ ಹರಿದಾಡಿವೆ.

ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಎರಡು ವಾರಗಳ ಹಿಂದೆ ಭಾರಿ ಮಳೆಯಾಗಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಮಿಜೌ ನಗರದಲ್ಲಿ ಸಹ ಭಾರಿ ಮಳೆಯಾಗಿದೆ.

ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರು ಘಟನೆ ಕುರಿತ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ನಡೆಸುವಂತೆ ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ರಸ್ತೆ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸುವಂತೆಯೂ ಸೂಚಿಸಿದ್ದಾರೆ ಎಂದು ವರದಿಯಾಗಿದೆ. 

ಚೀನಾದಲ್ಲಿ ಕಾರ್ಮಿಕರ ದಿನ ಪ್ರಯುಕ್ತ ನೀಡುವ ರಜೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರುತ್ತದೆ. ಇದೇ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಘಾತ ಹಾಗೂ ಪ್ರಕೃತಿ ವಿಕೋಪಗಳ ಪ್ರಮಾಣ ಹೆಚ್ಚಾಗಿದೆ. 

ಮಿಜೌ–ದಾಬು ಎಕ್ಸ್‌ಪ್ರೆಸ್‌ವೇ ದುರ್ಘಟನೆ ನಂತರ ತುರ್ತು ನಿರ್ವಹಣಾ ಮಂತ್ರಾಲಯ, ಸಾರಿಗೆ ಸಚಿವಾಲಯ ಹಾಗೂ ಇನ್ನಿತರ ಇಲಾಖೆಗಳು ಜಂಟಿಯಾಗಿ ರಕ್ಷಣಾ ಕಾರ್ಯ ನಡೆಸುತ್ತಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.