ನವದೆಹಲಿ: ಖಾಲಿಸ್ತಾನ ಬೆಂಬಲಿಗರು ಕೆನಡಾದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವುದು ತೀವ್ರ ಕಳವಳಕಾರಿ ಬೆಳವಣಿಗೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತೀಯ ರಾಜತಾಂತ್ರಿಕರ ಮೇಲೆ ಕೆನಡಾ ನಿಗಾ ಇರಿಸಿರುವುದನ್ನು ಒಪ್ಪಲಾಗದು’ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್, ‘ಕಳೆದ ತಿಂಗಳು ಕ್ಯಾನ್‌ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿತ್ತು. ಇದು ಭಾರತೀಯ ಸಮುದಾಯದವರಿಗೆ ಅಸಮಾಧಾನ ತಂದಿದೆ’ ಎಂದು ಹೇಳಿದ್ದಾರೆ.
ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಕುರಿತು ಕೆನಡಾದ ಆರೋಪಗಳ ಬಗ್ಗೆ ಆಸ್ಟ್ರೇಲಿಯಾ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಕ್ಯಾನ್‌ಬೆರಾ ಕೆನಡಾದ ನ್ಯಾಯಾಂಗ ಪ್ರಕ್ರಿಯೆಯನ್ನು ಗೌರವಿಸುತ್ತದೆ ಎಂದು ವಾಂಗ್ ತಿಳಿಸಿದ್ದಾರೆ.
‘ಆಸ್ಟ್ರೇಲಿಯಾದ್ಯಂತ ಎಲ್ಲ ಸಮುದಾಯದ ಜನರು ಸುರಕ್ಷಿತವಾಗಿರಲು ಮತ್ತು ಪರಸ್ಪರ ಗೌರವಿಸುವ ಹಕ್ಕನ್ನು ಹೊಂದಿದ್ದಾರೆ. ಜತೆಗೆ, ಜನರು ಶಾಂತಿಯುತವಾಗಿ ಪ್ರತಿಭಟಿಸುವುದು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ’ ಎಂದು ವಾಂಗ್ ಹೇಳಿದ್ದಾರೆ.
ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂಸಭಾ ದೇವಾಲಯದ ಆವರಣದೊಳಗೆ ಭಾನುವಾರ ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿರುವ ಘಟನೆ ನಡೆದಿತ್ತು. ಇದನ್ನು ಭಾರತದ ಹೈಕಮಿಷನ್ ಮತ್ತು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿವೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ವಿಎಚ್‌ಪಿ, ಬಿಜೆಪಿ, ಕಾಂಗ್ರೆಸ್ ನಾಯಕರೂ ಖಂಡಿಸಿದ್ದಾರೆ.
ಖಾಲಿಸ್ತಾನ ಪರ ಬ್ಯಾನರ್‌ಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಇದನ್ನು ಕಾಣಬಹುದಾಗಿದೆ ಎಂದು ಪೀಲ್ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಹಿಂದೂಸಭಾ ಮಂದಿರ ದೇಗುಲದ ಆವರಣದಲ್ಲಿ ಜನರು ಕೈ ಕೈ ಮಿಲಾಯಿಸಿ, ಹೊಡೆದಾಡಿಕೊಂಡಿರುವ ದೃಶ್ಯ ವಿಡಿಯೊದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.