ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಯಿಂದ ಕೇವಲ 300 ಕಿ.ಮೀ. ದೂರದಲ್ಲಿ ಚೀನಾದ 'ಬಂದರು ನಗರ' ನಿರ್ಮಾಣವಾಗುತ್ತಿದೆ. ಬಂದರು ಅಭಿವೃದ್ಧಿ ಮಾಡಲು ಶ್ರೀಲಂಕಾ ಅವಕಾಶ ನೀಡಿರುವ ಬೆನ್ನಲ್ಲೇ ಚೀನಾ 5 ಲಕ್ಷ ಡೋಸ್‌ಗಳಷ್ಟು ಕೋವಿಡ್–19 ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದ ತೀವ್ರ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಶ್ರೀಲಂಕಾದ ಪುನಶ್ಚೇತನ ಕಾರ್ಯಗಳಿಗಾಗಿ 500 ಮಿಲಿಯನ್ ಡಾಲರ್ ಸಾಲ ನೀಡಲು ಕಳೆದ ತಿಂಗಳು ಬೀಜಿಂಗ್ ಮತ್ತು ಕೊಲಂಬೊ ನಡುವೆ ಒಪ್ಪಂದ ಏರ್ಪಟ್ಟಿತ್ತು. ಕಳೆದ ವರ್ಷ ಮಾರ್ಚ್‌ನಲ್ಲೂ ಚೀನಾದಿಂದ ಶ್ರೀಲಂಕಾ ಇಷ್ಟೇ ಮೊತ್ತದ ಸಾಲ ಪಡೆದಿತ್ತು. ಕೆಲವು ತಿಂಗಳ ಹಿಂದೆ ಶ್ರೀಲಂಕಾದೊಂದಿಗೆ 1.5 ಬಿಲಿಯನ್ ಡಾಲರ್ ಮೊತ್ತದ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಚೀನಾ ಸಮ್ಮತಿಸಿದೆ.
ಕೋವಿಡ್–19 ಎರಡನೇ ಅಲೆಯ ತೀವ್ರತೆಯನ್ನು ಎದುರಿಸುತ್ತಿರುವ ಭಾರತವು ಶ್ರೀಲಂಕಾಗೆ ಸಹಕಾರ ನೀಡುವುದರಿಂದ ಹಿಂದೆ ಸರಿದಿದೆ. ಇದೇ ಸಮಯದಲ್ಲಿ ಚೀನಾ ಪೂರ್ಣ ಪ್ರಮಾಣದಲ್ಲಿ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ತನ್ನ ಪ್ರಭಾವ ವ್ಯಾಪಿಸಿಕೊಂಡಿದೆ. ಚೀನಾ ಹಾರ್ಬರ್ ಎಂಜಿನಿಯರಿಂಗ್ ಕಂಪನಿಯು ಅಭಿವೃದ್ಧಿ ಪಡಿಸಿರುವ 'ಕೊಲಂಬೊ ಪೋರ್ಟ್ ಸಿಟಿ' ಆಡಳಿತ ನಿರ್ವಹಣೆಗಾಗಿ ಸಮಿತಿ ರಚಿಸುವ ಮಸೂದೆಗೆ ಶ್ರೀಲಂಕಾ ಸಂಸತ್ ಇತ್ತೀಚೆಗಷ್ಟೇ ಅನುಮೋದನೆ ನೀಡಿದೆ. ಇದು ಭಾರತದ ಆಡಳಿತ ಕೇಂದ್ರ ನವದೆಹಲಿಯಲ್ಲಿ ತಳಮಳಕ್ಕೆ ಕಾರಣವಾಗಿದೆ.
ಶ್ರೀಲಂಕಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಹುದು ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿದರೂ ಅಧ್ಯಕ್ಷ ಗೊಟಬಯ ರಾಜಪಕ್ಷೆ ಮತ್ತು ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಷೆ ನೇತೃತ್ವದ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ಹೊಸ ಕಾನೂನಿಂದಾಗಿ ಚೀನಾ ಕಮ್ಯುನಿಕೇಷನ್ಸ್ ಕನ್‌ಸ್ಟ್ರಕ್ಷನ್ ಕಂಪನಿಯ ಭಾಗವಾಗಿರುವ ಚೀನಾ ಹಾರ್ಬರ್ ಎಂಜಿನಿಯರಿಂಗ್ ಕಂಪನಿಯು (ಸಿಎಚ್‌ಇಸಿ) ಬಂದರು ನಗರ ಅಭಿವೃದ್ಧಿ ಪಡಿಸಲು ಹಾದಿ ಸುಗಮವಾಗಿದೆ. ವಿಶೇಷ ಆರ್ಥಿಕ ವಲಯವಾಗಿ ಗುರುತಿಸಲಾಗಿರುವ ಸಾಗರದ 269 ಹೆಕ್ಟೇರ್ ಭಾಗದಲ್ಲಿ ಚೀನಾ ಬಂದರು ನಗರ ಅಭಿವೃದ್ಧಿ ಪಡಿಸುತ್ತಿದೆ. ಈಗಾಗಲೇ ಸಿಎಚ್‌ಇಸಿ, ಸಾಗರದ ಭಾಗವನ್ನು ಬಳಕೆ ಯೋಗ್ಯ ಭೂಮಿಯಾಗಿ ಪರಿವರ್ತಿಸಲು ಮತ್ತು ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ 1.4 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ.
ಕೊಲಂಬೊದ ಸಿಎಚ್‌ಇಸಿ ಬಂದರು ನಗರವು ಮುಂದೆ ವಿದೇಶದಲ್ಲಿ ಚೀನಾದ ನೆಲೆಯಾಗಿ ಪರಿವರ್ತನೆಯಾಗಬಹುದು ಎಂದು ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹಿಂದೂ ಮಹಾಸಾಗರ ವಲಯದಲ್ಲಿ ಹಾಗೂ ಬಾಂಗ್ಲಾದೇಶ ಮತ್ತು ನೇಪಾಳದಲ್ಲೂ ಚೀನಾ ಭೂಮಿ ಆಕ್ರಮಿಸಿಕೊಳ್ಳುವ ಅಥವಾ ಸ್ಥಳ ಅಭಿವೃದ್ಧಿ ಪಡಿಸುವ ಕಾರ್ಯ ಯೋಜನೆಯನ್ನು ವಿಸ್ತರಿಸುತ್ತಿದೆ. ಪೂರ್ವ ಲಡಾಕ್‌ನ ಎಲ್ಎಸಿ ಉದ್ದಕ್ಕೂ ಭಾರತ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನಡುವಿನ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ರಾಜತಾಂತ್ರಿಕ ಸಂಬಂಧ ಕುಸಿದಿದೆ. ಭಾರತದ ಸುತ್ತಲಿನ ರಾಷ್ಟ್ರಗಳಲ್ಲಿ ಕಳೆದ 12 ತಿಂಗಳಿಂದ ಚೀನಾ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.
ಶ್ರೀಲಂಕಾದ ಮೇಲೆ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವದ ಕುರಿತು ಭಾರತದ ಕಳವಳದೊಂದಿಗೆ ಕ್ವಾಡ್ ಸದಸ್ಯ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಸಹ ದನಿ ಗೂಡಿಸಿವೆ ಎಂದು ನವದೆಹಲಿಯ ಮೂಲಗಳಿಂದ ತಿಳಿದು ಬಂದಿದೆ.
ಸಾಲದ ಸುಳಿಯಲ್ಲಿ ಸಿಲುಕಿಸುವ ಚೀನಾದ ರಾಜತಾಂತ್ರಿಕತೆಯ ಪರಿಣಾಮದಿಂದ ಶ್ರೀಲಂಕಾ ಈಗಾಗಲೇ ಹಂಬಂಟೋಟ ಬಂದರನ್ನು 99 ವರ್ಷಗಳ ವರೆಗೂ ಗುತ್ತಿಗೆಗೆ ನೀಡಿದೆ.
ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪಡಿಸಲು ಭಾರತ ಮತ್ತು ಜಪಾನ್ ಜೊತೆಗಿನ ಮೂರು ರಾಷ್ಟ್ರಗಳ ಒಪ್ಪಂದವನ್ನು ಶ್ರೀಲಂಕಾ ಕೆಲವು ತಿಂಗಳ ಹಿಂದೆ ರದ್ದು ಪಡಿಸಿತ್ತು. ಅನಂತರದಲ್ಲಿ ಪಶ್ಚಿಮ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪಡಿಸಲು ಅದಾನಿ ಗ್ರೂಪ್ ಆಫ್ ಇಂಡಿಯಾಗೆ ಗುತ್ತಿಗೆ ನೀಡಿದೆ.
ಕೋವಿಡ್–19 ಬಿಕ್ಕಟ್ಟಿನಿಂದ ಚೇತರಿಕೆ ನೀಡಲು ಶ್ರೀಲಂಕಾಗೆ ಭಾರತ ಸರ್ಕಾರವು 2020ರ ಜುಲೈನಲ್ಲಿ 400 ಮಿಲಿಯನ್ ಡಾಲರ್‌ಗಳಷ್ಟು ಕರೆನ್ಸಿ ವಿನಿಮಯ ಸೌಲಭ್ಯವನ್ನು ನೀಡಿತ್ತು. ಮತ್ತೆ 1 ಬಿಲಿಯನ್ ಡಾಲರ್ ಕರೆನ್ಸಿ ವಿನಿಮಯ ಒಪ್ಪಂದದ ಕುರಿತು ಮಾತುಕತೆ ನಡೆದಿದೆಯಾದರೂ, ಕಾರ್ಯರೂಪಕ್ಕೆ ಬಂದಿಲ್ಲ. ಶ್ರೀಲಂಕಾ ಭಾರತಕ್ಕೆ ಪಾವತಿಸಬೇಕಾದ ಸಾಲದ ಮೊತ್ತವನ್ನು ಪಾವತಿಸಲು ಹೆಚ್ಚಿನ ಕಾಲಾವಧಿ ನೀಡುವ ಪ್ರಸ್ತಾಪಕ್ಕೂ ತಡೆಯಾಗಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್–19 ಎರಡನೇ ಅಲೆಯ ತೀವ್ರ ಪರಿಣಾಮಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ನೆರೆಯ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಲು ಅಡ್ಡಿಯಾಗಿದೆ.
2021ರ ಜನವರಿ ಅಂತ್ಯದಲ್ಲಿ ಭಾರತವು ಶ್ರೀಲಂಕಾಗೆ 5 ಲಕ್ಷ ಡೋಸ್‌ಗಳಷ್ಟು ಕೋವಿಡ್ ಲಸಿಕೆಗಳ ಪೂರೈಕೆ ಮಾಡಿದೆ. ಆದರೆ, ದೇಶದಲ್ಲಿ ಲಸಿಕೆ ಕೊರತೆ ಎದುರಾದ ಬೆನ್ನಲ್ಲೇ ವಿದೇಶಗಳಿಕೆ ಲಸಿಕೆ ನೀಡುವ 'ವ್ಯಾಕ್ಸಿನ್ ಮೈತ್ರಿ' ಕಾರ್ಯಕ್ರಮವನ್ನು ಸರ್ಕಾರವು ಸ್ಥಗಿತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.