ಢಾಕಾ : ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಬಾಂಗ್ಲಾದೇಶದ ಹಲವೆಡೆ ಶನಿವಾರ ಕಠಿಣ ನಿಷೇಧಾಜ್ಞೆ ಮುಂದುವರಿದಿತ್ತು. ರಾಜಧಾನಿ ಢಾಕಾದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವ ಸಲುವಾಗಿ ಭದ್ರತಾ ಪಡೆಗಳು ಪಹರೆ ಕಾರ್ಯದಲ್ಲಿ ನಿರತವಾಗಿವೆ.
ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ನಿಷೇಧಾಜ್ಞೆ ಸಡಿಲಿಸಲಾಗುತ್ತದೆ. ಈ ವೇಳೆ ಜನರು ಅಗತ್ಯವಸ್ತುಗಳನ್ನು ಕೊಳ್ಳಬಹುದು. ಪರಿಸ್ಥಿತಿ ಕೈಮೀರಿದರೆ ‘ಕಂಡಲ್ಲಿ ಗುಂಡು’ ಹಾರಿಸುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ ಎಂದು ಸಂಸದ ಒಬೈದುಲ್ ಕ್ವಾದರ್ ತಿಳಿಸಿದ್ದಾರೆ.
ಇಲ್ಲಿಯವರೆಗೆ 103 ಮಂದಿ ಮೃತಪಟ್ಟಿದ್ದಾರೆ ಎಂದು ಡೈಲಿ ಪ್ರೊಥೊಮ್ ಅಲೋ ಸುದ್ದಿಪತ್ರಿಕೆ ವರದಿ ಮಾಡಿದೆ. ಹಿಂಸಾಚಾರದಲ್ಲಿ ಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಢಾಕಾದಲ್ಲಿಯ ಅಮೆರಿಕ ರಾಯಭಾರ ಕಚೇರಿಯು ವರದಿ ಮಾಡಿದೆ.
ಢಾಕಾ ಜಿಲ್ಲೆಯ ನರ್ಸಿಂಗ್ಡಿಯ ಕಾರಾಗೃಹದ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ ಬಳಿಕ ಸುಮಾರು 800 ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್, ಪ್ರಧಾನಿ ಕಚೇರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಯತ್ನ ನಡೆದಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.