ADVERTISEMENT

ನಿರ್ಬಂಧದ ಜತೆಗೆ ಸೋಂಕು ಪತ್ತೆಗೂ ಇರಲಿ ಆದ್ಯತೆ: ವಿಶ್ವ ಆರೋಗ್ಯಸಂಸ್ಥೆ

ಕೋವಿಡ್‌: ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮೈಕ್‌ ಜೆ.ರ‍್ಯಾನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 20:00 IST
Last Updated 22 ಮಾರ್ಚ್ 2020, 20:00 IST
ಫ್ರಾನ್ಸ್‌ನಲ್ಲಿ ಮುಲ್‌ಹೌಸ್‌ನ ಆಸ್ಪತ್ರೆಯೊಂದರಿಂದ ಕೋವಿಡ್ ಪೀಡಿತ ರೋಗಿಯೊಬ್ಬರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಸಿಬ್ಬಂದಿ ವೈದ್ಯಕೀಯ ಹೆಲಿಕಾಪ್ಟರ್‌ಗೆ ಕಾಯುತ್ತಿರುವುದು 
ಫ್ರಾನ್ಸ್‌ನಲ್ಲಿ ಮುಲ್‌ಹೌಸ್‌ನ ಆಸ್ಪತ್ರೆಯೊಂದರಿಂದ ಕೋವಿಡ್ ಪೀಡಿತ ರೋಗಿಯೊಬ್ಬರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಸಿಬ್ಬಂದಿ ವೈದ್ಯಕೀಯ ಹೆಲಿಕಾಪ್ಟರ್‌ಗೆ ಕಾಯುತ್ತಿರುವುದು    

ಪ್ಯಾರಿಸ್ (ಎಎಫ್‌ಪಿ): ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಬಹುತೇಕ ರಾಷ್ಟ್ರಗಳು ತನ್ನ ನಿವಾಸಿಗಳಿಗೆ ಸ್ವಪ್ರೇರಿತವಾಗಿ ಗೃಹ ಬಂಧನದಲ್ಲಿ ಇರಲು ತಾಕೀತು ಮಾಡಿವೆ. ಅಲ್ಲದೆ, ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಹುತೇಕ ಬಂದ್‌ ಮಾಡಿವೆ.

‘ಲಾಕ್‌ಡೌನ್‌ ಹಾಗೂ ಗೃಹಬಂಧನ ಕಾರ್ಯಕ್ರಮಗಳನ್ನು ಕೈಬಿಟ್ಟರೆ ಸೋಂಕು ಇನ್ನಷ್ಟುವ್ಯಾಪಿಸಬಹುದು. ಈ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಸೇವೆ ಕಾರ್ಯಕ್ರಮಗಳ ನಿರ್ದೇಶಕ ಮೈಕ್‌ ಜೆ.ರ‍್ಯಾನ್‌ ಹೇಳಿದ್ದಾರೆ.

ಸೋಂಕು ಪತ್ತೆ ಮಾಡುವ ಮತ್ತು ಅದು ಹರಡದಂತೆ ತಡೆಯುವ ಕ್ರಮಗಳು ನಿರಂತರವಾಗಿ ಸಕ್ರಿಯವಾಗಿರಬೇಕು ಎಂದು ಸಲಹೆ ಮಾಡಿದ್ದಾರೆ.ನಿಯಂತ್ರಣ ಕ್ರಮಗಳ ಮಧ್ಯೆಯೂ ಕೋವಿಡ್‌–19ಗೆ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಜಾನ್‌ ಹಾಕಿನ್ಸ್‌ ವಿಶ್ವವಿದ್ಯಾಲಯದ ಅಂಕಿ ಅಂಶಗಳ ಪ್ರಕಾರ, ವಿಶ್ವದಾದ್ಯಂತ 3,11,989 ಜನರಿಗೆ ಸೋಂಕು ತಗುಲಿದ್ದರೆ, ಮೃತರ ಒಟ್ಟು ಸಂಖ್ಯೆ 13,407ಕ್ಕೆ ಏರಿದೆ.

ADVERTISEMENT

ಭಾನುವಾರ ಸ್ಪೇನ್‌ನಲ್ಲಿ ಒಂದೇ ದಿನ 394 ಜನರು ಸತ್ತಿದ್ದರೆ, ಇರಾನ್‌ನಲ್ಲಿ 129 ಮಂದಿ ಸತ್ತಿದ್ದಾರೆ.ಕೊಲಂಬಿಯ ಮತ್ತು ರೊಮಾನಿಯಾದಲ್ಲಿ ಕೋವಿಡ್‌ನಿಂದ ಮೃತಪಟ್ಟ ಮೊದಲ ಪ್ರಕರಣ ವರದಿಯಾಗಿದೆ.

ಅಮೆರಿಕ ನೆರವು, ಇರಾನ್ ನಿರಾಕರಣೆ: ಸೋಂಕು ವಿರುದ್ಧ ಹೋರಾಡಲು ಅಮೆರಿಕ ನೀಡಿದ ನೆರವು ಸ್ವೀಕರಿಸಲು ಇರಾನ್‌ನ ಸರ್ವೋಚ್ಛ ನಾಯಕ ಅಯತ್‌ ಉಲ್ಲಾ ಅಲಿ ಖಮೇನಿ ನಿರಾಕರಿಸಿದ್ದಾರೆ. ‘ಸೋಂಕು ಅಮೆರಿಕದ ಸೃಷ್ಟಿಯೇ ಆಗಿರುವ ಶಂಕೆ ಇದೆ.ಔಷಧ ನೆರವು ನೀಡುವ ನಿಮ್ಮ ಕ್ರಮವೂ ಸೋಂಕು ಹರಡುವುದರ ಸಂಚೇ ಆಗಿರಬಹುದು’ ಎಂದೂ ಹೇಳಿದ್ದಾರೆ.

ಮನೆಯಲ್ಲೇ ಇರಿ: ‘ಮನೆಯಲ್ಲೇ ಉಳಿಯಿರಿ, ಜೀವ ಉಳಿಸಿರಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜನರಿಗೆ ಕೋರಿದ್ದಾರೆ.

ನಾವು, ನಮ್ಮ ಕುಟುಂಬ, ನೆರೆಹೊರೆ, ದೇಶ ಎಲ್ಲವೂ ಮುಖ್ಯವಾಗಬೇಕು. ಯಶಸ್ಸು ಸಂಭ್ರಮಿಸುವ ದಿನ ಶೀಘ್ರವೇ ಬರಲಿದೆ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.