ADVERTISEMENT

ಢಾಕಾ| 30 ದಿನಗಳ ಬಳಿಕ ಮೆಟ್ರೊ ಸೇವೆ ಪುನರಾರಂಭ: ನಿಟ್ಟುಸಿರು ಬಿಟ್ಟ ‌ಪ್ರಯಾಣಿಕರು

ಪಿಟಿಐ
Published 25 ಆಗಸ್ಟ್ 2024, 12:46 IST
Last Updated 25 ಆಗಸ್ಟ್ 2024, 12:46 IST
   

ಢಾಕಾ: ಮೀಸಲಾತಿ ವಿರೋಧಿಸಿ ನಡೆದ ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಢಾಕಾ ಮೆಟ್ರೋ ಸೇವೆಯನ್ನು ಭಾನುವಾರ ಪುನರಾರಂಭಿಸಲಾಗಿದೆ.

ಇಂದು ಬೆಳಿಗ್ಗೆ 7 ಗಂಟೆಗೆ ಮೆಟ್ರೊ ಸೇವೆ ಪುನರಾರಂಭಗೊಂಡಿದೆ. ಆದರೆ ಮಿರ್ಪುರ-10 ಮತ್ತು ಕಾಜಿಪಾರ ನಿಲ್ದಾಣಗಳು ಇನ್ನೂ ಕೆಲವು ದಿನಗಳ ಕಾಲ ಮುಚ್ಚಿರಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸಂಚಾರ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಪ್ರತಿನಿತ್ಯ ಅಲೆದಾಡಬೇಕಾಗಿತ್ತು. ಸದ್ಯ ಮೆಟ್ರೊ ಸೇವೆ ಪುನರಾರಂಭಗೊಂಡಿರುವುದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

ಮೀಸಲಾತಿ ವಿರೋಧಿಸಿ ಜುಲೈನಲ್ಲಿ ನಡೆದ ಪ್ರತಿಭಟನೆಯ ವೇಳೆ ಮೀರ್ಪುರ-10 ಮತ್ತು ಕಾಜಿಪಾರ ನಿಲ್ದಾಣಗಳನ್ನು ಧ್ವಂಸಗೊಳಿಸಲಾಗಿತ್ತು. ಜುಲೈ ಮೂರನೇ ವಾರ ಢಾಕಾ ಮೆಟ್ರೊ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

'ಮೆಟ್ರೋವನ್ನು ಯಾವುದೇ ರೀತಿಯ ವಿಧ್ವಂಸಕ ಕೃತ್ಯಗಳಿಂದ ರಕ್ಷಿಸಲು ಹೆಚ್ಚಿನ ಭದ್ರತೆ ಒದಗಿಸಲಾಗುವುದು' ಎಂದು ರಸ್ತೆ ಸಾರಿಗೆ ಮತ್ತು ಸಂವಹನ ಸಲಹೆಗಾರ ಮುಹಮ್ಮದ್ ಫೌಜುಲ್ ಕಬೀರ್ ಖಾನ್ ಹೇಳಿದ್ದಾರೆ.

ಢಾಕಾ ಹೈಕೋರ್ಟ್‌ನ ಅಧಿಕಾರಿಯೊಬ್ಬರು ತಮ್ಮ ಕಚೇರಿಗೆ ಮೆಟ್ರೊದಲ್ಲಿಯೇ ಪ್ರಯಾಣಿಸಿದ್ದಾರೆ. ಮೆಟ್ರೊ ಸೇವೆ ಪುನರಾರಂಭವಾಗಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾದ ಢಾಕಾದಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಬಾಂಗ್ಲಾದೇಶವು, 2022ರ ಡಿಸೆಂಬರ್ 28ರಂದು ಜಪಾನ್ ನೆರವಿನೊಂದಿಗೆ ತನ್ನ ಮೊದಲ ಮೆಟ್ರೊ ರೈಲು ಸೇವೆಯನ್ನು ಆರಂಭಿಸಿತ್ತು. ಅಂದಿನ ಪ್ರಧಾನಿ ಶೇಖ್ ಹಸೀನಾ ಅವರು ಈ ಯೋಜನೆಯನ್ನು ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.