ನವದೆಹಲಿ: ಜಾಗತಿಕ ಸಮುದಾಯದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಭಾರತ, ಅನೇಕ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಯನ್ನು ವಿತರಿಸಲು ಪ್ರಾರಂಭಿಸಿದೆ.
ಇದರಂತೆ ಬ್ರೆಜಿಲ್ ರಾಷ್ಟ್ರಕ್ಕೂ 20 ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ರವಾನಿಸಿದೆ. ಈ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಹನುಮಂತ ದೇವರ ಚಿತ್ರದೊಂದಿಗೆ ಭಾರತಕ್ಕೆ ಧನ್ಯವಾದ ಅರ್ಪಿಸಿರುವುದು ವಿಶೇಷ ಗಮನ ಸೆಳೆದಿದ್ದು, ಭಾರತೀಯರ ಪ್ರೀತಿಗೆ ಪಾತ್ರವಾಗಿದ್ದಾರೆ.
ರಾಮಾಯಣದಲ್ಲಿ ಹನುಮಂತ ದೇವರು ಸಂಜೀವಿನಿ ಪರ್ವತವನ್ನು ಹೊರುವಂತೆ ಭಾರತದಿಂದ ಬ್ರೆಜಿಲ್‌ಗೆ ಕೋವಿಡ್-19 ಲಸಿಕೆಗಳನ್ನು ಸಾಗಿಸುವ ಚಿತ್ರವನ್ನು ಹಂಚಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ. ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಉತ್ತಮ ಪಾಲುದಾರರನ್ನು ಹೊಂದಿರುವುದಕ್ಕೆ ಬ್ರೆಜಿಲ್ ಗೌರವಾನ್ವಿತವಾಗಿದೆ. ಭಾರತದಿಂದ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿರುವುದಕ್ಕಾಗಿ ಧನ್ಯವಾದಗಳು ಎಂದು ಉಲ್ಲೇಖಿಸಿದರು.
ಇದನ್ನೂ ಓದಿ:ಭಾರತದಿಂದ ಕೋವಿಡ್-19 ಲಸಿಕೆ ಪಡೆದ ಬ್ರೆಜಿಲ್
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಪ್ರಧಾನಿ ನರೇಂದ್ರ ಮೋದಿ, ಗೌರವ ನಮ್ಮದು. ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಭಾರತವು ಬ್ರೆಜಿಲ್‌ನ ವಿಶ್ವಾಸಾರ್ಹ ಪಾಲುದಾರವಾಗಿದೆ. ಉಭಯ ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದರು.
ಅಂದ ಹಾಗೆ ಬ್ರೆಜಿಲ್‌ಗೆ ಭಾರತ 20 ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ರವಾನಿಸಿದೆ. ಹಾಗಿದ್ದರೂ ದಕ್ಷಿಣ ಅಮೆರಿಕದ ಅತಿ ದೊಡ್ಡ ರಾಷ್ಟ್ರದಲ್ಲಿ ಪೂರೈಕೆ ಕೊರತೆ ಕಾಡುತ್ತಿದೆ ಎಂಬುದಾಗಿ ಅಲ್ಲಿನ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.