ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಧ್ರುವಿ ಪಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 (Miss India Worldwide 2024) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಲಾಯಿತು.
ಇದು ನನಗೆ ಜಾಗತಿಕವಾಗಿ ಸಿಕ್ಕ ಮನ್ನಣೆ. ಮಿಸ್ ಇಂಡಿಯಾ ವರ್ಲ್ಡ್ ವೈಡ್ ಗೆಲ್ಲುವುದು ನನಗೆ ಅತ್ಯಂತ ಗೌರವವಾಗಿದೆ. ಇದು ಮಿಸ್ ವರ್ಲ್ಡ್‌ಗೂ ಹೆಚ್ಚಿನ ಗೌರವ ಎಂದು ಧ್ರುವಿ ಪಟೇಲ್ ಹೇಳಿದ್ದಾರೆ.
ಗುಜರಾತ್ ಮೂಲದ ಧ್ರುವಿ ಪಟೇಲ್ ಅವರು ಅಮೆರಿಕದಲ್ಲಿ ಕಂಪ್ಯೂಟರ್ ಇನ್ಫರ್ಮೆಷನ್ ಸಿಸ್ಟಮ್ ಪದವಿ ಓದುತ್ತಿದ್ದಾರೆ. ಬಾಲಿವುಡ್ ನಟಿಯಾಗುವ ಅಪೇಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಲಿಸಾ ಅಬ್ಡೋಲ್ಹಾಕ್ ಅವರು ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ರನ್ನರ್ ಅಪ್ ಆದರು. ಮಾಳವಿಕಾ ಶರ್ಮಾ ಅವರು ಸೆಕೆಂಡ್ ರನ್ನರ್ ಅಪ್ ಆಗಿ ಗೆಲುವು ಸಾಧಿಸಿದರು.
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಇಂಡಿಯನ್ ಫೆಸ್ಟಿವಲ್ ಕಮಿಟಿ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಸ್ಪರ್ಧೆ ಆಯೋಜಿಸುತ್ತದೆ. 31ನೇ ವರ್ಷಾಚರಣೆ ಆಚರಿಸುತ್ತಿರುವ ಈ ಕಮಿಟಿ ಹೊರದೇಶಗಳಲ್ಲಿರುವ ಭಾರತೀಯ ಪ್ರತಿಭೆಗಳನ್ನು ಗುರುತಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.