ADVERTISEMENT

ಮಾತುಕತೆಯಿಂದಲೇ ಸಂಘರ್ಷ ಪರಿಹರಿಸಬೇಕು: ಜೈಶಂಕರ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:05 IST
Last Updated 24 ಅಕ್ಟೋಬರ್ 2024, 14:05 IST
ಎಸ್. ಜೈಶಂಕರ್ –ಪಿಟಿಐ ಚಿತ್ರ
ಎಸ್. ಜೈಶಂಕರ್ –ಪಿಟಿಐ ಚಿತ್ರ   

ಕಜಾನ್ : ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಿಕೊಳ್ಳುವುದು ಈ ಹೊತ್ತಿನ ವಿಶೇಷ ಅಗತ್ಯ ಎಂದು ಗುರುವಾರ ಹೇಳಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿವಾದಗಳನ್ನು ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೆಚ್ಚು ನ್ಯಾಯಸಮ್ಮತವಾದ ಜಾಗತಿಕ ವ್ಯವಸ್ಥೆಯನ್ನು ರೂಪಿಸಲು ಐದು ಅಂಶಗಳನ್ನು ಪ್ರಸ್ತಾಪಿಸಿದ ಜೈಶಂಕರ್, ವಸಾಹತು ಕಾಲದಿಂದ ಉಳಿದುಕೊಂಡು ಬಂದಿರುವ ಜಾಗತಿಕ ಮೂಲಸೌಕರ್ಯದಲ್ಲಿನ ವಿರೂಪಗಳನ್ನು ಸರಿಪಡಿಸುವ ಕೆಲಸವನ್ನು ಭೌಗೋಳಿಕ ಸಮಗ್ರತೆಯನ್ನು ಗೌರವದಿಂದ ಕಾಣುತ್ತಲೇ ಮಾಡಬೇಕಿದೆ ಎಂದು ಹೇಳಿದರು. 

ಬ್ರಿಕ್ಸ್‌ ದೇಶಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಭಾಗಿಯಾದ ಜೈಶಂಕರ್ ಈ ಮಾತು ಹೇಳಿದರು. ‘ಕಷ್ಟದ ಸಂದರ್ಭದಲ್ಲಿ ನಾವು ಇಲ್ಲಿ ಸೇರಿದ್ದೇವೆ. ಬಹುಕಾಲದಿಂದ ಉಳಿದಿರುವ ಸವಾಲುಗಳ ವಿಚಾರದಲ್ಲಿ ಜಗತ್ತು ಹೊಸದಾಗಿ ಆಲೋಚಿಸಬೇಕಿದೆ. ನಾವು ಇಲ್ಲಿ ಸೇರಿರುವುದು ಆ ಕೆಲಸ ಮಾಡಲು ನಾವು ನಿಜಕ್ಕೂ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿದೆ’ ಎಂದರು.

ADVERTISEMENT

ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು, ಅದರಲ್ಲಿ ವಿನಾಯಿತಿ ಇರಬಾರದು. ಭಯೋತ್ಪಾದನೆಯ ವಿಚಾರದಲ್ಲಿ ಇನಿತೂ ಸಹನೆ ತೋರಬಾರದು ಎಂದು ಅವರು ಹೇಳಿದರು.

ಇಂಡೋನೇಷ್ಯಾ ಸಚಿವರ ಜತೆ ಮಾತುಕತೆ

ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗಿಯಾಗಿರುವ ಎಸ್. ಜೈಶಂಕರ್‌ ಅವರು ಬುಧವಾರ ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಓನೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.  ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್‌ ‘ಕಜಾನ್‌ನಲ್ಲಿ ಇಂದು  ಇಂಡೋನೇಷ್ಯಾ ವಿದೇಶಾಂಗ ಸಚಿವ ಸುಗಿಒನೊ ಅವರನ್ನು ಭೇಟಿ ಮಾಡಿ ಸಂತೋಷವಾಯಿತು. ಉಭಯ ರಾಷ್ಟ್ರಗಳ ನಡುವಿನ ಸಮಗ್ರ ಪಾಲುದಾರಿಕೆಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಿದೆವು’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.