ADVERTISEMENT

ಕೆರೆಯಲ್ಲಿ ಕಳೆದು ಹೋಗಿದ್ದ ನಿಶ್ಚಿತಾರ್ಥದ ಉಂಗುರ ಹುಡುಕಿಕೊಟ್ಟ ಡೈವರ್‌

ಪಿಟಿಐ
Published 30 ಮೇ 2021, 15:55 IST
Last Updated 30 ಮೇ 2021, 15:55 IST
ವಿಂಡರ್‌ಮೇರ್ ಕೆರೆಯ ನೋಟ (ರಾಯಿಟರ್ಸ್‌ ಚಿತ್ರ)
ವಿಂಡರ್‌ಮೇರ್ ಕೆರೆಯ ನೋಟ (ರಾಯಿಟರ್ಸ್‌ ಚಿತ್ರ)   

ಲಂಡನ್‌: ಇಂಗ್ಲೆಂಡ್‌ನ ಅತಿದೊಡ್ಡ ಕೆರೆಯಲ್ಲಿ ಭಾರತದ ಜೋಡಿ ಕಳೆದುಕೊಂಡಿದ್ದ ನಿಶ್ಚಿತಾರ್ಥದ ಉಂಗುರವನ್ನು ಯುವ, ಸಾಹಸಿ, ಚಾಣಾಕ್ಷ ಡೈವರ್‌ (ಮುಳುಗುತಜ್ಞ) ಹುಡುಕಿಕೊಟ್ಟಿದ್ದಾರೆ. ಆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಈಗ ಡೈವರ್‌ನ ನೆರವನ್ನು ಕೊಂಡಾಡಿದ್ದಾರೆ.

ಕಳೆದ ವಾರ ವಿಂಡರ್‌ಮೇರ್ ಕೆರೆಯ ತೀರದಲ್ಲಿ ಫೋಟೊಗ್ರಫಿಯಲ್ಲಿ ತೊಡಗಿದ್ದ ವೇಳೆ, ಉತ್ತರ ಲಂಡನ್‌ನ ಎಡ್ಮಂಟನ್‌ನ ವಿಕಿ ಪಟೇಲ್(25) ಬರ್ಮಿಂಗ್‌ಹ್ಯಾಮ್‌ನ ರೆಬೆಕಾ ಚೌಕ್ರಿಯಾ (26) ಅವರಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.

ಕೆರೆಯ ದಡದಲ್ಲಿ ರೆಬೆಕ್ಕಾ ಅವರಿಗೆ ಪ್ರಶ್ನೆ ಕೇಳಿದ್ದ ಪಟೇಲ್‌, ವಜ್ರದ ಉಂಗುರವನ್ನು ನೀಡಿದ್ದರು. ಮೇ 24ರಂದು ಪುನಃ ಅದೇ ಸ್ಥಳಕ್ಕೆ ಫೋಟೊಗ್ರಫಿಗಾಗಿ ಜೋಡಿ ಬಂದಿದ್ದರು.

ADVERTISEMENT

ಆದರೆ, ಫೋಟೊಗ್ರಫಿಯಲ್ಲಿ ತೊಡಗಿದ್ದಾಗ ಉಂಗುರವು ರಬೆಕ್ಕಾ ಅವರ ಬೆರಳಿಂದ ಜಾರಿ ಕೆರೆಗೆ ಬಿದ್ದಿತ್ತು ಎಂದು ಸುದ್ದಿ ಮಾಧ್ಯಮ ಬಿಬಿಸಿ ವರದಿ ಮಾಡಿದೆ.

ಉಂಗುರವನ್ನು ಹುಡುಕಲು ಜೋಡಿ ಮೊದಲಿಗೆ ಕ್ಯಾಮೆರಾದ ಟ್ರೈಪಾಡ್‌ ಬಳಸಿದ್ದಾರೆ. ಆದರೆ, ಅದು ಸಿಕ್ಕಿಲ್ಲ. 'ಉಂಗುರ ಕೆರೆಯಲ್ಲಿ ಬಿದ್ದಾಗ ನನಗೆ ಗಾಬರಿಯಾಗಿತ್ತು. ನೀರು ತುಂಬಾ ತಣ್ಣಗಿತ್ತು. ಅಲ್ಲದೆ, ನೀರಿನ ಅಡಿಯಲ್ಲಿ ಏನೂ ಕಾಣುತ್ತಿರಲಿಲ್ಲ,' ಎಂದು ಪಟೇಲ್‌ ಹೇಳಿದ್ದಾರೆ.

ಫ್ರೀಡೈವರ್‌ ಆಂಗಸ್ ಹೊಸ್ಕಿಂಗ್ ಈ ಸಂಗತಿಯನ್ನು ಸ್ನೇಹಿತರೊಬ್ಬರಿಂದ ಕೇಳಿ ತಿಳಿದುಕೊಂಡಿದ್ದರು. ಕೂಡಲೇ ಜೋಡಿಯ ನೆರವಿಗೂ ಧಾವಿಸಿದ್ದರು.

21 ವರ್ಷದ ಡೈವರ್‌ ಆಂಗಸ್‌ ಹೋಸ್ಕಿಂಗ್‌ ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ನೆರವಾಗುವ ಹವ್ಯಾಸವನ್ನು ಮೂರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಇಂಥ ಸಮಸ್ಯೆಗಳನ್ನು ಬಗೆಹರಿಸಲೆಂದೇ ತನ್ನ ಸ್ನೇಹಿತರೊಂದಿಗೆ ಸೇರಿ ತಂಡವನ್ನೂ ಕಟ್ಟಿಕೊಂಡಿದ್ದಾರೆ.

'ಆ ಕೆರೆಯ ನೀರಿನಲ್ಲಿ ಏನೂ ಕಾಣುವಂತಿರಲಿಲ್ಲ. ಹೀಗಾಗಿ ಉಂಗುರ ಸಿಗುವ ವಿಶ್ವಾಸವೇನೂ ನನ್ನಲ್ಲಿ ಇರಲಿಲ್ಲ. ಕೆರೆಯ ತುಂಬ ಮಣ್ಣು, ಕೆಸರು ತುಂಬಿಕೊಂಡಿತ್ತು. ಒಂದು ನಾಣ್ಯ ಕೆರೆಯಲ್ಲಿ ಬಿದ್ದರೂ ಅದು ನೇರವಾಗಿ ಕೆಸರಲ್ಲಿ ಸೇರುತ್ತಿತ್ತು. ಆದರೆ, ಲೋಹ ಶೋಧಕವನ್ನು ಬಳಸಿ 20 ನಿಮಿಷ ನಡೆಸಿದ ತೀವ್ರ ಹುಡುಕಾಟದ ನಂತರ ನನಗೆ ಆಶಾ ಭಾವ ಕಾಣಿಸಿತು,' ಎಂದು ಡೈವರ್‌ ಹೋಸ್ಕಿಂಗ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

'ಹೋಸ್ಕಿಂಗ್‌ ಅತ್ಯಂತ ಪ್ರತಿಭಾವಂತ ಡೈವರ್‌. ಸುಮಾರು ಹೊತ್ತಿನ ತೀವ್ರ ಹುಡುಕಾಟದ ನಂತರ ಹೋಸ್ಕಿಂಗ್‌ ಉಂಗುರದೊಂದಿಗೆ ಮೇಲೆದ್ದರು. ಆಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ,' ಎಂದು ಪಟೇಲ್‌ ಹೇಳಿಕೊಂಡಿದ್ದಾರೆ.

ಹೋಸ್ಕಿಂಗ್‌ ಅವರ ಸಾಹಸವನ್ನು ಕೊಂಡಾಡಿರುವ ನವ ಜೋಡಿ, ಅವರ ಪರಿಸರ ಕಾರ್ಯವನ್ನೂ ಪ್ರಶಂಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.