ನವದೆಹಲಿ: ‘ರಷ್ಯಾದಿಂದ ತೈಲ ಖರೀದಿಸುವ ವಿಷಯದಲ್ಲಿ ಭಾರತ ಅಷ್ಟೇ ಅಲ್ಲ, ವಿಶ್ವದ ಯಾವುದೇ ದೇಶವನ್ನು ನಾವು ಸಮಾನವಾಗಿಟೀಕಿಸುತ್ತೇವೆ’ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಹೇಳಿದ್ದಾರೆ.
ಮಂಗಳವಾರ ‘ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಅವರು, ‘ಯುರೋಪ್, ಏಷ್ಯಾ ಅಥವಾ ವಿಶ್ವದ ಇನ್ಯಾವುದೇ ದೇಶವಾಗಲಿ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುವವರನ್ನು ನಾವು ಟೀಕಿಸದೇ ಬಿಡೆವು. ಏಕೆಂದರೆ ತೈಲ ವ್ಯಾಪಾರದಿಂದ ಸಂಪಾದಿಸುವ ಹಣವನ್ನು ರಷ್ಯಾ ಉಕ್ರೇನ್ ಮೇಲಿನ ಯುದ್ಧಕ್ಕೆ ಮತ್ತು ಉಕ್ರೇನಿಯರ ಹತ್ಯೆಗೆ ಬಳಸುತ್ತದೆ’ ಎಂದು ಆರೋಪಿದರು.
ಯುರೋಪ್ ಒಕ್ಕೂಟದ ರಾಷ್ಟ್ರಗಳು ಫೆಬ್ರುವರಿಯಿಂದ ನವೆಂಬರ್‌ವರೆಗೆ ಅತೀ ಹೆಚ್ಚು ಪಳೆಯುಳಿಕೆ ಇಂಧನ ಖರೀದಿಸಿವೆ. ಇನ್ನು ಕಲ್ಲಿದ್ದಲಿನ ವಿಚಾರದಲ್ಲಿ ಭಾರತ ಆಮದು ಮಾಡಿಕೊಂಡಿರುವುದಕ್ಕಿಂತಲೂ ಶೇ 50ರಷ್ಟು ಹೆಚ್ಚು ಕಲ್ಲಿದ್ದಲನ್ನು ಯುರೋಪ್ ಒಕ್ಕೂಟವು ರಷ್ಯಾದಿಂದ ಆಮದು ಮಾಡಿಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಇತ್ತೀಚೆಗಷ್ಟೇ ಹೇಳಿದ್ದರು. ಸಚಿವರ ಈ ಹೇಳಿಕೆ ಉಲ್ಲೇಖಿಸಿ, ಭಾರತದ ಇಂಧನ ಖರೀದಿ ಹಿತಾಸಕ್ತಿಯನ್ನು ಯಾವ ರೀತಿ ನೋಡುವಿರಿ ಎನ್ನುವ ಪ್ರಶ್ನೆಗೆ ಕುಲೇಬಾ ಪ್ರತಿಕ್ರಿಯಿಸಿದ್ದಾರೆ.
‘ರಷ್ಯಾದ ತೈಲ ಖರೀದಿಯನ್ನು ಭಾರತ ಏಕೆ ಗಮನಾರ್ಹವಾಗಿ ಹೆಚ್ಚಿಸಿತು? ಎನ್ನುವ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳುವುದಾದರೆ,ರಷ್ಯಾ ತುಂಬಾ ಪ್ರಲೋಭನೆಗೊಳಿಸುವ ಪರಿಸ್ಥಿತಿಗಳು, ಅಗ್ಗದ ಬೆಲೆಗಳು, ಉತ್ತಮ ಒಪ್ಪಂದಗಳನ್ನು ತ್ವರೆಮಾಡಿತು. ಇನ್ನು ರಷ್ಯಾ ತನ್ನ ತೈಲವನ್ನು ಅಗ್ಗದ ಬೆಲೆಗಳಲ್ಲಿ ಏಕೆ ನೀಡುತ್ತಿದೆ? ಎನ್ನುವ ಪ್ರಶ್ನೆಗೂ ಉತ್ತರ ಬಹಳ ಸರಳ, ಉಕ್ರೇನ್‌ನಲ್ಲಿ ಆರಂಭಿಸಿದ ಯುದ್ಧ ಮತ್ತು ಇದರಿಂದ ಯುರೋಪ್ ಮಾರುಕಟ್ಟೆಗಳಿಗೆ ತೈಲ ಪೂರೈಕೆಗೆ ಆಗಿರುವ ಅಡಚಣೆ ಅಷ್ಟೇ. ಹಾಗಾಗಿ ರಷ್ಯಾದ ತೈಲವನ್ನು ಅಗ್ಗದ ಬೆಲೆಗೆ ಖರೀದಿಸಲು ಭಾರತಕ್ಕೆ ಅವಕಾಶವಾಗಿದೆ. ಇದು ಉಕ್ರೇನಿಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದರು.
‘ಇದೆಲ್ಲದರ ಪರಿಣಾಮರಷ್ಯಾದ ಆಕ್ರಮಣದಿಂದ ಉಕ್ರೇನಿಯರು ದಿನವೂ ಬಳಲುತ್ತಿರುವುದು, ಸಾಯುತ್ತಿರುವುದು ವಾಸ್ತವ. ಮನೆಗಳಲ್ಲಿ ಬಿಸಿನೀರು, ವಿದ್ಯುತ್ ಇಲ್ಲದೆ ಜನರು ಚಳಿಯಲ್ಲಿ ಪ್ರತಿ ದಿನವೂ ಸಾಯುತ್ತಿದ್ದಾರೆ. ರಷ್ಯಾದ ತೈಲ ಖರೀದಿಸುವವರು ಈ ಸಂಗತಿಗಳನ್ನೂ ಗಮನಿಸುವರು ಎನ್ನುವುದು ನಮ್ಮ ಭಾವನೆ’ ಎಂದು ಕುಲೆಬಾ ಹೇಳಿದರು.
‘ಭಾರತವು ತೈಲ ಖರೀದಿಯನ್ನು ತನ್ನ ವಿದೇಶಾಂಗ ನೀತಿಯ ಅನುಸಾರ ಆಲೋಚಿಸಿದರೆ, ಅದನ್ನು ಬದಲಿಸಿಕೊಳ್ಳಬೇಕು. ಏಕೆಂದರೆ, ಭಾರತಕ್ಕೆ ಆಗುವ ಲಾಭ ನಮ್ಮನ್ನು ಹೆಚ್ಚು ತೊಂದರೆಗೀಡು ಮಾಡುತ್ತಿದೆ. ಒಬ್ಬರ ಸಂಕಟದಿಂದ ಲಾಭ ಮಾಡಿಕೊಳ್ಳುವುದು ನೈತಿಕವಾಗಿಯೂ ಸರಿಯಲ್ಲ, ಇದನ್ನು ಭಾರತ ಸರ್ಕಾರವೂ ಬೆಂಬಲಿಸುವುದಿಲ್ಲ ಎನ್ನುವುದು ನಮ್ಮ ಭಾವನೆ. ಅದಕ್ಕಾಗಿಯಾದರೂ ಭಾರತ ತನ್ನ ವಿದೇಶಾಂಗ ನೀತಿಯನ್ನು ಉಕ್ರೇನ್ ಹಿತದೃಷ್ಟಿ ಕಡೆಗೆ ಮರುಹೊಂದಿಸಿಕೊಳ್ಳಬೇಕು’ ಎಂದು ಕುಲೆಬಾ ಅಭಿಪ್ರಾಯಪಟ್ಟರು.
‘ರಷ್ಯಾದ ತೈಲದ ಮೇಲೆ ಇತ್ತೀಚೆಗೆ ಹಲವು ರಾಷ್ಟ್ರಗಳು ದರ ಮಿತಿ ಯೋಜನೆ ಜಾರಿಗೊಳಿಸಿದ್ದನ್ನು ನಾವು ಸ್ವಾಗತಿಸಿದ್ದೇವೆ. ಆದರೆ, ಈ ದರ ಮಿತಿಯು ನಾವು ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ಆದರೆ, ಈ ಹೆಜ್ಜೆಯು ತಾತ್ವಿಕವಾಗಿ ಸರಿಯಾದ ದಿಕ್ಕಿನಲ್ಲಿದೆ’ ಎಂದರು.
‘ಜಾಗತಿಕ ರಂಗದಲ್ಲಿ ಭಾರತಕ್ಕೆ ಪ್ರಮುಖ ಸ್ಥಾನವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿಯಿಂದ ಬದಲಾವಣೆ ಸಾಧ್ಯವಿದೆ. ಉಕ್ರೇನ್‌ನಲ್ಲಿ ಪುಟಿನ್ ಯುದ್ಧ ಕೊನೆಗೊಳಿಸಲು ಭಾರತದ ಪ್ರಬಲ ನಾಯಕನ ನೆರವಿನ ಅಗತ್ಯವಿದೆ ’ ಎಂದು ಕುಲೆಬಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.