ಸ್ಕ್ರಾಮೆಂಟೊ: ಶಸ್ತ್ರಚಿಕಿತ್ಸೆ ನಡೆಸುತ್ತಿರುವಾಗಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯೊಂದಕ್ಕೆ ವೈದ್ಯರೊಬ್ಬರು ಹಾಜರಾಗಿದ್ದಾರೆ.ಈ ಬಗ್ಗೆ ಕ್ಯಾಲಿಫೋರ್ನಿಯಾ ವೈದ್ಯಕೀಯ ಮಂಡಳಿ ತನಿಖೆ ನಡೆಸುವ ಸಾಧ್ಯತೆ ಇದೆ.
ಹೀಗೆ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿದ್ದಾಗ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾದ ವೈದ್ಯರ ಹೆಸರು ಡಾ. ಸ್ಕಾಟ್ ಗ್ರೀನ್. ಇವರೊಬ್ಬ ಪ್ಲಾಸ್ಟಿಕ್ ಸರ್ಜನ್. ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು.
‘ದಿ ಸ್ಕ್ರಾಮೆಂಟೊ ಬೀ‘ ವರದಿಯ ಪ್ರಕಾರ, ಗ್ರೀನ್ ಅವರು ಕಳೆದ ಗುರುವಾರ ಸರ್ಜಿಕಲ್ ದಿರಿಸಿನೊಂದಿಗೆ, ಶಸ್ತ್ರಚಿಕಿತ್ಸಾ ಕೊಠಡಿಯಿಂದಲೇ (ಆಪರೇಷನ್ ಥಿಯೇಟರ್) ವಿಚಾರಣೆಗೆ ಹಾಜರಾದರು. ಪರದೆಯ ಮೇಲೆ ಆಪರೇಷನ್ ಕೊಠಡಿಯಲ್ಲಿದ್ದ ವೈದ್ಯರನ್ನು ಕಂಡ ನ್ಯಾಯಾಧೀಶರು, ರೋಗಿಯ ಕಾಳಜಿಯಿಂದಾಗಿ ಈ ವಿಚಾರಣೆ ಮುಂದುವರಿಸಲು ಹಿಂಜರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರೀನ್, ‘ಈ ಕೊಠಡಿಯಲ್ಲಿ ನನ್ನೊಂದಿಗೆ ಇನ್ನೊಬ್ಬರು ಶಸ್ತ್ರಚಿಕಿತ್ಸಕರಿದ್ದಾರೆ. ನಾನು ವಿಚಾರಣೆಗೆ ಹಾಜರಾಗಿ, ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಬಹುದು‘ ಎಂದು ಹೇಳಿದರು.
ಈ ಹಂತದಲ್ಲಿ ವಿಚಾರಣೆ ನಡೆಸುವುದು ಸೂಕ್ತವಲ್ಲ. ಮೊದಲು ರೋಗಿಯ ಅಗತ್ಯಕ್ಕೆ ತಕ್ಕಂತೆ ವೈದ್ಯರು ನಡೆದುಕೊಳ್ಳಬೇಕು. ಹಾಗಾಗಿ ಈ ಪ್ರಕರಣದ ವಿಚಾರಣೆಗೆ ಇನ್ನೊಂದು ದಿನಾಂಕವನ್ನು ನಿಗದಿಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು. ಡಾ.ಸ್ಕಾಟ್ ಗ್ರೀನ್ ನ್ಯಾಯಾಲಯದ ಕ್ಷಮೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.