ನವದೆಹಲಿ: ಡಾಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ‘ಡಾಮಿನಿಕಾ ಅವಾರ್ಡ್ ಆಫ್ ಆನರ್’ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಕೋವಿಡ್– 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡಾಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ನವೆಂಬರ್ 19ರಿಂದ 21ರವರೆಗೆ ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆಯಲಿರುವ ಮುಂಬರುವ ಭಾರತ-ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಡಾಮಿನಿಕಾ ದ್ವೀಪರಾಷ್ಟ್ರದ ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡಾಮಿನಿಕಾ ಪ್ರಧಾನ ಮಂತ್ರಿಗಳ ಕಚೇರಿಯ ಹೇಳಿಕೆ ತಿಳಿಸಿದೆ.
‘ಪ್ರಧಾನಿ ಮೋದಿ ಅವರು 2021ರ ಫೆಬ್ರುವರಿಯಲ್ಲಿ ಡಾಮಿನಿಕಾಕ್ಕೆ 70,000 ಡೋಸ್ ಅಸ್ಟ್ರಾಜೆನೆಕಾ ಕೋವಿಡ್–19 ಲಸಿಕೆ ಪೂರೈಸಿದ್ದರು. ಈ ಉದಾರ ಕೊಡುಗೆಯು, ಡಾಮಿನಿಕಾಕ್ಕೆ ಕೆರಿಬಿಯನ್‌ನಲ್ಲಿರುವ ತನ್ನ ನೆರೆಯ ದೇಶಗಳಿಗೆ ನೆರವು ನೀಡಲು ಅನುವು ಮಾಡಿಕೊಟ್ಟಿತ್ತು’ ಎಂದಿದೆ.
ಮೋದಿ ಅವರ ನಾಯಕತ್ವದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಡಾಮಿನಿಕಾಕ್ಕೆ ಭಾರತ ನೀಡಿರುವ ಬೆಂಬಲವನ್ನು ಮತ್ತು ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಭಾರತದ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.