ADVERTISEMENT

ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಪಿಟಿಐ
Published 21 ನವೆಂಬರ್ 2024, 2:08 IST
Last Updated 21 ನವೆಂಬರ್ 2024, 2:08 IST
<div class="paragraphs"><p>(ಚಿತ್ರ ಕೃಪೆ: x/<a href="https://x.com/narendramodi">@narendramodi</a>)</p></div>
   

(ಚಿತ್ರ ಕೃಪೆ: x/@narendramodi)

ಜಾರ್ಜ್‌ಟೌನ್: ಡೊಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ 'ಡೊಮಿನಿಕಾ ಅವಾರ್ಡ್‌ ಆಫ್ ಆನರ್' ನೀಡಿ ಗೌರವಿಸಿದೆ.

ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆಯುತ್ತಿರುವ ಭಾರತ-ಕೆರಿಕಮ್ (ಕೆರಿಬಿಯನ್‌ ಕಮ್ಯುನಿಟಿ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದ್ವೀಪರಾಷ್ಟ್ರದ ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ADVERTISEMENT

ಕೋವಿಡ್‌–19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಗೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

'ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಸಮರ್ಪಿಸುತ್ತೇನೆ' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ 'ಈ ಗೌರವವನ್ನು ನನ್ನ ದೇಶದ ಸದೋದರಿಯರು ಹಾಗೂ ಸಹೋದರರಿಗೆ ಸಮರ್ಪಿಸುತ್ತೇನೆ. ಇದು ಉಭಯ ರಾಷ್ಟ್ರಗಳ ನಡುವೆ ಬೇರ್ಪಡಲು ಸಾಧ್ಯವಾಗದ ಬಾಂಧವ್ಯದ ಸೂಚಕವಾಗಿದೆ' ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ 'ನಿಮ್ಮ ಮಾತುಗಳು ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದು ಡೊಮಿನಿಕಾದ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರಿಟ್‌‌ಗೆ ತಿಳಿಸಿದ್ದಾರೆ. ಅತ್ಯಂತ ವಿನೀತನಾಗಿ ಹಾಗೂ ಕೃತಜ್ಞಾಪೂರ್ವಕ 'ಡೊಮಿನಿಕಾ ಅವಾರ್ಡ್‌ ಆಫ್ ಆನರ್' ಪ್ರಶಸ್ತಿ ಸ್ವೀಕರಿಸುತ್ತೇನೆ' ಎಂದು ಮೋದಿ ಹೇಳಿದ್ದಾರೆ.

'ನೀವು ಕೋವಿಡ್-19 ಸಮಯದಲ್ಲಿ ಭಾರತದ ಬೆಂಬಲದ ಕುರಿತು ಪ್ರಸ್ತಾಪ ಮಾಡಿದ್ದೀರಿ. ನಮ್ಮ ಒಗ್ಗಟ್ಟು ಗಡಿಯಾಚೆಗಿನ, ಖಂಡಗಳಾದ್ಯಂತ ನಮ್ಮ ಬಾಂಧವ್ಯವನ್ನು ಬಲಪಡಿಸಿತು ಎಂದು ತಿಳಿಯಲು ಖುಷಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಡೊಮಿನಿಕಾ ದೇಶದೊಂದಿಗೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡುತ್ತೇವೆ' ಎಂದು ಅವರು ತಿಳಿಸಿದ್ದಾರೆ.

'ಭಾರತ ಪ್ರಧಾನಿ ನರೇಂದ್ರ ಮೋದಿ ಅವರು 2021ರ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಲಸಿಕೆ ಪೂರೈಸಿದ್ದರು. ಇದು ಜೀವರಕ್ಷಕವಾಗಿ ಪರಿಣಮಿಸಿತ್ತು' ಎಂದು ಡೊಮಿನಿಕಾ ಪ್ರಧಾನಿ ಉಲ್ಲೇಖಿಸಿದ್ದರು.

ಗಯಾನಾ ಹಾಗೂ ಬಾರ್ಬಡೋಸ್ ಸಹ ಪ್ರಧಾನಿ ಮೋದಿ ಅವರನ್ನು ಗೌರವಿಸಲಿದ್ದು, ಇದರೊಂದಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಸಂಖ್ಯೆ 19ಕ್ಕೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.