ವಾಷಿಂಗ್ಟನ್: ಹಿಂಸಾಚಾರದಿಂದ ಏನನ್ನೂ ಸಾಧಿಸಲಾಗದು. ಅಮೆರಿಕದಲ್ಲಿ ಭಿನ್ನಾಭಿಪ್ರಾಯಗಳನ್ನು ಮತಪೆಟ್ಟಿಗೆಯಲ್ಲಿ ಸರಿಪಡಿಸಲಾಗುತ್ತದೆಯೇ ಹೊರತು, ಗುಂಡುಗಳಿಂದ ಅಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ನಡೆದ ಯತ್ನಕ್ಕೆ ಸಂಬಂಧಿಸಿದಂತೆ ಅವರು ರಾಷ್ಟ್ರವನ್ನುದ್ದೇಶಿಸಿ 'ಓವೆಲ್ ಕಚೇರಿ'ಯಲ್ಲಿ ಭಾನುವಾರ ಮಾತನಾಡಿದ್ದಾರೆ. ದೇಶದ ಭವಿಷ್ಯದ ಬಗ್ಗೆ ಅಮೆರಿಕದ ಕೆಲವರಿಗೆ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, 'ರಾಜಕೀಯವು ಕದನ ಕಣವಾಗಬಾರದು' ಎಂದು ಒತ್ತಿ ಹೇಳಿದ್ದಾರೆ.
'ಭಿನ್ನಾಭಿಪ್ರಾಯಗಳು ಸಹಜ. ಅಮೆರಿಕದ ಪ್ರಜಾಪ್ರಭುತ್ವವು ಮಾನವ ಸ್ವಭಾವದ ಭಾಗವೇ ಆಗಿದೆ. ಹಾಗಂತ, ರಾಜಕೀಯವು ಅಕ್ಷರಶಃ ಕದನ ಕಣ ಅಥವಾ ಕೊಲ್ಲುವ ಸ್ಥಳವಾಗಬಾರದು' ಎಂದು ಹೇಳಿದ್ದಾರೆ.
'ರಿಪಬ್ಲಿಕನ್ ಪಕ್ಷವು ಪ್ರಚಾರದ ವೇಳೆ ನನ್ನ ಸಾಧನೆಗಳನ್ನು ಟೀಕಿಸಲಿದೆ. ದೇಶದ ಜನರೆದುರು ತಮ್ಮ ಯೋಜನೆಗಳನ್ನು ಇಡಲಿದೆ. ನಾನೂ ಪ್ರವಾಸ ಕೈಗೊಳ್ಳುತ್ತೇನೆ. ನನ್ನ ಸಾಧನೆಗಳು, ದೂರದೃಷ್ಟಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ. ವಾದ ಮಾಡುತ್ತೇವೆ, ಒಬ್ಬರಿಗೊಬ್ಬರು ಹೋಲಿಸಿಕೊಳ್ಳುತ್ತೇವೆ. ಅಭ್ಯರ್ಥಿಗಳ ಸಾಧನೆ, ಚಾರಿತ್ರ್ಯ, ವಿಚಾರಗಳು, ಸಿದ್ಧಾಂತಗಳನ್ನು ತುಲನೆ ಮಾಡುತ್ತೇವೆ. ಆದರೆ, ಅಮೆರಿಕದಲ್ಲಿ ನಮ್ಮ ಭಿನ್ನ ಅಭಿಪ್ರಾಯಗಳನ್ನು ಮತಪೆಟ್ಟಿಗೆಯ ಮೂಲಕ ಸರಿಪಡಿಸಿಕೊಳ್ಳುತ್ತೇವೆ. ಗುಂಡುಗಳ ಮೂಲಕ ಅಲ್ಲ' ಎಂದು ಪುನರುಚ್ಛರಿಸಿದ್ದಾರೆ.
'ಅಮೆರಿಕವನ್ನು ಬದಲಿಸುವ ಶಕ್ತಿ ಯಾವಾಗಲೂ ಜನಸಾಮಾನ್ಯರ ಕೈಯಲ್ಲೇ ಇರಬೇಕು. ಕೊಲೆಗಡುಕರ ಕೈಯಲ್ಲಿ ಅಲ್ಲ' ಎಂದು ಪ್ರತಿಪಾದಿಸಿದ್ದಾರೆ.
'ತೀವ್ರತೆ ಕಡಿಮೆ ಮಾಡಬೇಕಿದೆ'
'ರಾಜಕೀಯದಲ್ಲಿನ ತೀವ್ರತೆಯನ್ನು ಕಡಿಮೆ ಮಾಡುವುದು ಅಗತ್ಯ ಎಂದು ಹೇಳಲು ಬಯಸುತ್ತೇನೆ. ನೆನಪಿರಲಿ, ನಮ್ಮ ನಡುವೆ ವಿಚಾರಗಳಿಗೆ ಅಸಮ್ಮತಿಗಳಿದ್ದರೂ, ನಾವು ಶತ್ರುಗಳಲ್ಲ; ನೆರೆಹೊರೆಯವರು, ನಾವೆಲ್ಲ ಸ್ನೇಹಿತರು, ಸಹೋದ್ಯೋಗಿಗಳು, ನಾಗರಿಕರು. ಎಲ್ಲಕ್ಕಿಂತಲೂ ಮುಖ್ಯವಾಗಿ ನಾವೆಲ್ಲ ಅಮೆರಿಕದ ಪ್ರಜೆಗಳು. ಎಲ್ಲರೂ ಒಂದಾಗಿ ನಿಲ್ಲಬೇಕು' ಎಂದು ಕರೆ ನೀಡಿದ್ದಾರೆ.
'ಟ್ರಂಪ್ ಅವರ ಮೇಲೆ ಪನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ ದಾಳಿಯು, ನಾವೆಲ್ಲ ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ಅರಿಯಲು ಹಾಗೂ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು ಆಲೋಚಿಸಲು ಕರೆ ನೀಡಿದೆ' ಎಂದು ಪ್ರತಿಪಾದಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್ ಅವರ ಮೇಲೆ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ದಾಳಿ ನಡೆದಿತ್ತು. ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್ ಅವರತ್ತ ಐದು ಬಾರಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಪ್ರೇಕ್ಷಕರೊಬ್ಬರು ಮೃತಪಟ್ಟಿದ್ದು, ಟ್ರಂಪ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಟ್ರಂಪ್ ಅವರ ಕಿವಿಗೆ ಗಾಯವಾಗಿದೆ. ಇನ್ನಿಬ್ಬರ ಸ್ಥಿತಿ ಗಂಭಿರವಾಗಿದೆ. ದಾಳಿ ನಡೆಸಿದ ವ್ಯಕ್ತಿಯನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದ್ದು, ಆತನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.