ವಾಷಿಂಗ್ಟನ್: ಆಲ್‌ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ಮೃತಪಟ್ಟಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಖಚಿತಪಡಿಸಿದ್ದಾರೆ.
ಅಫ್ಗಾನಿಸ್ತಾನ–ಪಾಕಿಸ್ತಾನ ಗಡಿ ಭಾಗದಲ್ಲಿ ನಡೆಸಲಾಗಿರುವಭಯೋತ್ಪಾದನೆ ನಿರ್ಮೂಲನೆ ಕಾರ್ಯಾಚರಣೆಯಲ್ಲಿ ಹಮ್ಜಾ ಲಾಡೆನ್ ಬಲಿಯಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಶ್ವೇತ ಭವನ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕಾರ್ಯಾಚರಣೆ ನಡೆದ ದಿನ, ಸಮಯದ ಯಾವುದೇ ಮಾಹಿತಿ ನೀಡಲಾಗಿಲ್ಲ.
ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕ ಮಾಧ್ಯಮಗಳು ಹಮ್ಜಾ ಹತ್ಯೆಯಾಗಿರುವ ಬಗ್ಗೆ ವರದಿ ಮಾಡಿದ್ದವು. ಕಳೆದ 2 ವರ್ಷಗಳಲ್ಲಿಅಮೆರಿಕ ಭಾಗಿಯಾಗಿದ್ದ ಕಾರ್ಯಾಚರಣೆಯಲ್ಲಿ ಬಿನ್ ಲಾಡೆನ್ ಮಗನ ಹತ್ಯೆಯಾಗಿರುವುದಾಗಿ ಗುಪ್ತಚರ ಅಧಿಕಾರಿಗಳ ಹೇಳಿಕೆಗಳೊಂದಿಗೆ ವರದಿ ಪ್ರಕಟಗೊಂಡಿದ್ದವು.
ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹಮ್ಜಾ ಸಾವು ಖಚಿತಪಡಿಸಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಸಾರ್ವಜನಿಕವಾಗಿ ಸುದ್ದಿಯನ್ನು ಖಚಿತಪಡಿಸಿರಲಿಲ್ಲ.
ಲಾಡೆನ್ ಮೂರನೇ ಹೆಂಡತಿಯ ಮಗನಾದ ಹಮ್ಜಾ, ಆತನ 20 ಮಕ್ಕಳಲ್ಲಿ 15ನೇಯವನು. 30 ವರ್ಷದ ಹಮ್ಜಾ ಆಲ್‌ಖೈದಾ ಸಂಘಟನೆಯ ನಾಯಕನಾಗಿ ಬೆಳೆಯುತ್ತಿದ್ದಾನೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯು ಬಹುಮಾನ ಘೋಷಿಸುವ ವೇಳೆ ಹೊರಡಿಸಿದ್ದ ಪ್ರಕಟಣೆಯಲ್ಲಿ ಉಲ್ಲೇಖಿಸಿತ್ತು.
ಅಮೆರಿಕ ವಿದೇಶಾಂಗ ಇಲಾಖೆಯು ಹಮ್ಜಾ ತಲೆಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು 2019ರ ಫೆಬ್ರುವರಿಯಲ್ಲಿ ಘೋಷಿಸಿತ್ತು. ಆದರೆ ಮಾಧ್ಯಮ ವರದಿಗಳ ಪ್ರಕಾರ, ಈ ಬಹುಮಾನ ಘೋಷಣೆಗೂ ಮುನ್ನವೇ ಹಮ್ಜಾನ ಕೊಲೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.