ವಾಷಿಂಗ್ಟನ್: ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ತಿರುಚುವ ಯತ್ನಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ಸಂಬಂಧ ಅಮೆರಿಕದ ವಿಶೇಷ ವಕೀಲ ಜಾಕ್ ಸ್ಮಿತ್ ನೇತೃತ್ವದ ತಂಡವು ಹೊಸ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.
ಪರಿಷ್ಕೃತ ದೋಷಾರೋಪ ಪಟ್ಟಿಯಲ್ಲಿ 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ತಿರುಚುವ ಯತ್ನದ ಭಾಗವಾಗಿ ಈಗಾಗಲೇ ಟ್ರಂಪ್ ವಿರುದ್ಧ ಮಾಡಲಾದ ಆರೋಪಗಳನ್ನು ಪುನರುಚ್ಚರಿಸಲಾಗಿದೆ. ಜತೆಗೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಟ್ರಂಪ್ ಮರುಚುನಾವಣೆಯನ್ನು ಬಯಸಿದ್ದರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿದ್ದ ಜೋ ಬೈಡನ್ ಅವರ ಚುನಾವಣಾ ಗೆಲುವನ್ನು ತಡೆಯಲು ಟ್ರಂಪ್ ಹಲವು ರೀತಿಯಲ್ಲಿ ಪಿತೂರಿ ನಡೆಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.
ಈ ಪ್ರಕರಣವನ್ನು ಹೊಸ ಗ್ರ್ಯಾಂಡ್ ಜ್ಯೂರಿಗೆ (ವಿಚಾರಣಾ ಕೋರ್ಟ್) ನೀಡಲಾಗಿದೆ. ಆದರೆ, ಅದು ಪ್ರಕರಣದ ಮೂಲ ಸಾಕ್ಷ್ಯವನ್ನು ಕೇಳಿಲ್ಲ ಎಂದು ನ್ಯಾಯಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಜುಲೈ 1ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, 6–3 ಬಹುಮತದ ತೀರ್ಪು ನೀಡಿದ್ದರು. ಇದೇ ಮೊದಲ ಬಾರಿಗೆ, ಮಾಜಿ ಅಧ್ಯಕ್ಷರು ತಮ್ಮ ಅಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿಕ್ಷೆಯಿಂದ ವಿನಾಯಿತಿ ಪಡೆಯಬಹುದು. ಆದರೆ, ಅನಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದಿದ್ದರು.
ಕೆಳಹಂತದ ನ್ಯಾಯಾಲಯಗಳು ಟ್ರಂಪ್ ಅವರ ಪ್ರಕರಣದಲ್ಲಿ ನಿರ್ಧಾರಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತೀರ್ಮಾನಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದರು.
ಟ್ರಂಪ್ ಮತ್ತೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅಮೆರಿಕದ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.