ವಾಷಿಂಗ್ಟನ್(ಪಿಟಿಐ): 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜಿಯಾದಲ್ಲಿನ ತಮ್ಮ ಸೋಲನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಹಾಗೂ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ನ್ಯಾಯಾಲಯ ದೋಷಾರೋಪ ಹೊರಿಸಿದೆ.
ಟ್ರಂಪ್ ಜೊತೆಗೆ ಇತರ 18 ಮಂದಿ ವಿರುದ್ಧ ಫುಲ್ಟನ್ ಕೌಂಟಿ ನ್ಯಾಯಾಲಯವು ದೋಷಾರೋಪ ಹೊರಿಸಿದೆ.
‘ಚುನಾವಣಾ ಫಲಿತಾಂಶವನ್ನು ಕಾನೂನುಬಾಹಿರವಾಗಿ ಟ್ರಂಪ್ ಪರವಾಗಿರುವಂತೆ ಬದಲಾಯಿಸುವ ನಿಟ್ಟಿನಲ್ಲಿ ನಡೆದ ಪಿತೂರಿಯೊಂದಿಗೆ ಉದ್ದೇಶಪೂರ್ವಕ ಹಾಗೂ ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು’ ಎಂದು ದೋಷಾರೋಪಪಟ್ಟಿಯಲ್ಲಿ ಹೇಳಲಾಗಿದೆ.
ಫುಲ್ಟನ್ ಕೌಂಟಿಯ ಜಿಲ್ಲಾ ಅಟಾರ್ನಿ ಫಾನಿ ವಿಲ್ಲಿಸ್ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ಪ್ರಕರಣದ ಎಲ್ಲ 19 ಜನ ಪ್ರತಿಪಾದಿಗಳು ಆಗಸ್ಟ್ 25ರ ಮಧ್ಯಾಹ್ನದ ಒಳಗಾಗಿ ಶರಣಾಗಬೇಕು ಎಂಬುದಾಗಿ ವಿಲ್ಲಿಸ್ ಪ್ರಕಟಿಸಿದರು’ ಎಂದು ಸಿಎನ್‌ಎನ್ ವರದಿ ಮಾಡಿದೆ.
‘ಎಲ್ಲ ಆಪಾದಿತರನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಲು ಉದ್ದೇಶಿಸಿದ್ದಾಗಿ ವಿಲ್ಲಿಸ್ ಹೇಳಿದ್ದಾರೆ. ಮುಂದಿನ ಆರು ತಿಂಗಳ ಒಳಗಾಗಿ ಟ್ರಂಪ್ ವಿರುದ್ಧ ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರವೇ ಈ ದಿನಾಂಕ ನಿಗದಿಪಡಿಸಲಾಗುವುದು’ ಎಂದು ತಿಳಿಸಿರುವುದಾಗಿಯೂ ವರದಿ ಮಾಡಿದೆ.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಶ್ವೇತಭವನವನ್ನು ಮತ್ತೊಮ್ಮೆ ಪ್ರವೇಶಿಸಬೇಕು ಎಂಬ ಪ್ರಯತ್ನದಲ್ಲಿರುವ ಟ್ರಂಪ್ ವಿರುದ್ಧ ಹೊರಿಸಲಾಗಿರುವ ನಾಲ್ಕನೇ ಕ್ರಿಮಿನಲ್ ಆರೋಪ ಇದಾಗಿದೆ.
ಟ್ರಂಪ್ ಅವರ ಮಾಜಿ ವಕೀಲ ರುಡಿ ಗಿಲಿಯಾನಿ, ಶ್ವೇತಭವನ ಸಿಬ್ಬಂದಿ ಮಾಜಿ ಮುಖ್ಯಸ್ಥ ಮಾರ್ಕ್ ಮಿಡೋವ್ಸ್, ಶ್ವೇತಭವನದ ಮಾಜಿ ವಕೀಲ ಜಾನ್ ಈಸ್ಟ್‌ಮನ್, ನ್ಯಾಯಾಂಗ ಇಲಾಖೆಯ ಮಾಜಿ ಅಧಿಕಾರಿ ಜೆಫ್ರಿ ಕ್ಲಾರ್ಕ್ ಆಪಾದಿತರ ಪೈಕಿ ಪ್ರಮುಖರು.
ಟ್ರಂಪ್ ಪ್ರತಿಕ್ರಿಯೆ: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ‘ತಮ್ಮ ವಿರುದ್ಧದ ದೋಷಾರೋಪಗಳು ರಾಜಕೀಯ ಪ್ರೇರಿತ’ ಎಂದಿದ್ದಾರೆ.
ಫಾಕ್ಸ್ ನ್ಯೂಸ್ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ರಾಜಕೀಯ ಪ್ರೇರಿತ ಈ ಆರೋಪವನ್ನು ಮೂರು ವರ್ಷಗಳ ಹಿಂದೆಯೇ ಹೊರಿಸಬಹುದಿತ್ತು. ಮುಂದಿನ ವರ್ಷದ ಚುನಾವಣೆಗಾಗಿ ನಾನು ಪ್ರಚಾರ ಆರಂಭಿಸಿದ್ದು, ಈಗ ನನ್ನ ವಿರುದ್ಧ ವ್ಯವಸ್ಥಿತವಾಗಿ ಇಂತಹ ಆರೋಪವನ್ನು ಹೊರಿಸಲಾಗುತ್ತಿದೆ’ ಎಂದಿದ್ದಾರೆ.
‘ಫುಲ್ಟನ್ ಜಿಲ್ಲಾ ಅಟಾರ್ನಿ ವಿಲ್ಲಿಸ್ ಅವರು 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಕ್ರಮ ಎಸಗಿದವರ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕು. ಅಂದಿನ ಅಕ್ರಮದ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸುತ್ತಿರುವವರ ಮೇಲಲ್ಲ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.