ವಾಷಿಂಗ್ಟನ್: ಫ್ಲೊರಿಡಾದ ಮಾಜಿ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಅಮೆರಿಕದ ಮುಂದಿನ ಅಟಾರ್ನಿ ಜನರಲ್ ಆಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಮಕ ಮಾಡಿದ್ದಾರೆ.
59 ವರ್ಷ ಬೊಂಡಿ ಅವರು ದೀರ್ಘ ಕಾಲದಿಂದ ಟ್ರಂಪ್ ಅವರ ನಂಬಿಕಸ್ಥರಲ್ಲಿ ಒಬ್ಬರು.
ಟ್ರಂಪ್ ಅವರು ಮೊದಲು ವಾಗ್ದಂಡನೆಗೊಳಗಾದಾಗ ಅವರ ಪರವಾಗಿ ಬೊಂಡಿ ವಾದ ಮಂಡಿಸಿದ್ದರು. 2024 ಚುನಾವಣೆಯುದ್ದಕ್ಕೂ ಟ್ರಂಪ್ ಪರ ಪ್ರಚಾರ ಮಾಡಿದ್ದರು.
ಪಾಮ್ ಬೊಂಡಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದನ್ನು ಟ್ರಂಪ್ ಅವರು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.
‘20 ವರ್ಷಗಳಿಂದ ವಕೀಲೆಯಾಗಿರುವ ಬೊಂಡಿಯವರು ಅಪರಾಧಿಗಳ ಪಾಲಿಗೆ ಕಠಿಣವಾಗಿದ್ದರು. ಫ್ಲೊರಿಡಾದ ಜನರಲ್ಲಿ ಸುರಕ್ಷತೆಯ ಭಾವವನ್ನು ಮೂಡಿಸಿದ್ದರು’ ಎಂದು ಟ್ರಂಪ್ ಹೇಳಿದ್ದಾರೆ.
2016ರಲ್ಲಿ ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೂ ಬೊಂಡಿ ಪ್ರಚಾರ ನಡೆಸಿದ್ದರು. ಇತ್ತೀಚಿನ ಚುನಾವಣಾ ಸಮಾವೇಶವೊಂದರಲ್ಲಿ ಬೊಂಡಿ ಅವರು ಟ್ರಂಪ್ ‘ಸ್ನೇಹಿತೆ’ ಎಂದು ಸಂಬೋಧಿಸಿದ್ದರು.
2010ರಲ್ಲಿ ಫ್ಲೊರಿಡಾದ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗುವ ಮೂಲಕ ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಪಡೆದಿದ್ದರು. ಎರಡು ಅವಧಿಗೆ ಅವರು ಕಾರ್ಯನಿರ್ವಹಿಸಿದ್ದರು.
(ವಾಷಿಂಗ್ಟನ್ ಪೋಸ್ಟ್ ವರದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.