ADVERTISEMENT

ಟ್ರಂಪ್ ಮೇಲೆ ದಾಳಿ | ಬಂದೂಕುಧಾರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇರಲಿಲ್ಲ: ಎಫ್‌ಬಿಐ

ರಾಯಿಟರ್ಸ್
Published 15 ಜುಲೈ 2024, 4:19 IST
Last Updated 15 ಜುಲೈ 2024, 4:19 IST
<div class="paragraphs"><p>ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌</p></div>

ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನದ ‘ರಿಪಬ್ಲಿಕನ್’ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (78) ಅವರ ಮೇಲೆ ಬಂದೂಕುಧಾರಿ ಏಕಾಂಗಿಯಾಗಿ ಗುಂಡಿನ ದಾಳಿ ನಡೆಸಿದ್ದಾನೆ. ಆತನಿಗೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಾದ ಎಫ್‌ಬಿಐ (ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್) ತಿಳಿಸಿದೆ.

ADVERTISEMENT

ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಬಂದೂಕುಧಾರಿಯನ್ನು 20 ವರ್ಷದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂದು ಗುರುತಿಸಲಾಗಿದೆ. ಈತ ಪೆನ್ಸಿಲ್ವೇನಿಯಾದ ಮತದಾರರ ಪಟ್ಟಿಯಲ್ಲಿ ತನ್ನನ್ನು ‘ರಿಪಬ್ಲಿಕನ್‌’ ಎಂದು ನೋಂದಾಯಿಸಿಕೊಂಡಿದ್ದನು. ದಾಳಿ ಬೆನ್ನಲ್ಲೇ ಅಮೆರಿಕದ ಸೀಕ್ರೆಟ್‌ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಆತನನ್ನು ಹತ್ಯೆಗೈದಿದ್ದಾರೆ.

‘ಬಂದೂಕುಧಾರಿ ಥಾಮಸ್ ಸತ್ತಿರಬಹುದು. ಆದರೆ, ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹೇಳಿದ್ದಾರೆ.

ಈ ದಾಳಿಯನ್ನು ‘ಹತ್ಯೆ ಯತ್ನ’ ಮತ್ತು ‘ಸಂಭವನೀಯ ದೇಶೀಯ ಭಯೋತ್ಪಾದನಾ ಕೃತ್ಯ’ವೆಂದು ಪರಿಗಣಿಸಲಾಗಿದೆ. ತನಿಖೆಯ ಈ ಹಂತದಲ್ಲಿ ಥಾಮಸ್‌ ಒಬ್ಬನೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಎಫ್‌ಬಿಐನ ಸಹಾಯಕ ನಿರ್ದೇಶಕ ರಾಬರ್ಟ್ ವೆಲ್ಸ್ ಹೇಳಿದ್ದಾರೆ.

ಪ್ರಕರಣ ಸಂಬಂಧ ಭಯೋತ್ಪಾದನಾ ನಿಗ್ರಹ ವಿಭಾಗ ಮತ್ತು ಅಪರಾಧ ವಿಭಾಗಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ದಾಳಿ ನಡೆಸಲು 5.56 ಎಂಎಂ ರೈಫಲ್ ಅನ್ನು ಬಳಸಲಾಗಿದೆ. ದಾಳಿಯ ಉದ್ದೇಶ ತಿಳಿಯಲು ಎಫ್‌ಬಿಐ ಅಧಿಕಾರಿಗಳು ಥಾಮಸ್‌ನ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ ಅವರ ಮೇಲೆ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ದಾಳಿ ನಡೆದಿತ್ತು. ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್‌ ಅವರತ್ತ ಐದು ಬಾರಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಟ್ರಂಪ್‌ ಅವರ ಕಿವಿಗೆ ಗಾಯವಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.