ವಾಷಿಂಗ್ಟನ್: ‘ಚೀನಾ ವೈರಸ್ (ಕೊರೊನಾ ವೈರಸ್)’ ವುಹಾನ್ ಪ್ರಯೋಗಾಲಯದಿಂದ ಹರಡಿದೆ ಎಂಬ ನನ್ನ ಹೇಳಿಕೆ ಸತ್ಯವಾದದ್ದು ಮತ್ತು ಈಗ ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ಈಗ ಎಲ್ಲರೂ, ನನ್ನ ಶತ್ರು ಎಂದು ಪರಿಗಣಿಸಲ್ಪಟ್ಟವರೂ ಚೀನಾ ವೈರಸ್ ವುಹಾನ್‌ನ ಪ್ರಯೋಗಾಲಯದಿಂದ ಹರಡಿದೆ ಎಂದು ಅಂದು ಟ್ರಂಪ್ ಹೇಳಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಈ ‘ಪ್ರಯೋಗಾಲಯ ಸೋರಿಕೆ’ಯಿಂದ ಉಂಟಾದ ಸಾವು ಮತ್ತು ವಿನಾಶಕ್ಕೆ ಚೀನಾಕ್ಕೆ ದಂಡ ವಿಧಿಸಬೇಕೆಂದು ಅವರು ಕರೆ ನೀಡಿದ್ದಾರೆ.
‘ಡಾ.ಫೌಸಿ ಮತ್ತು ಚೀನಾ ನಡುವಣ ಇ–ಮೇಲ್ ಸಂದೇಶಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸಾವು ಮತ್ತು ವಿನಾಶಕ್ಕೆ ಕಾರಣವಾದದ್ದಕ್ಕೆ ಚೀನಾವು ಅಮೆರಿಕಕ್ಕೆ ಮತ್ತು ವಿಶ್ವ ರಾಷ್ಟ್ರಗಳಿಗೆ 10 ಲಕ್ಷ ಕೋಟಿ ಡಾಲರ್’ ನೀಡಬೇಕು ಎಂದೂ ಟ್ರಂಪ್ ಆಗ್ರಹಿಸಿದ್ದಾರೆ.
ಅಮೆರಿಕದ ಕೊರೊನಾ ವೈರಸ್ ಸಲಹೆಗಾರ ಡಾ. ಆಂಥೋನಿ ಫೌಸಿ ಅವರ ಖಾಸಗಿ ಇ–ಮೇಲ್‌ಗಳು ಮಾಧ್ಯಮಗಳಿಗೆ ಬಹಿರಂಗವಾಗಿದ್ದು, ಕೊರೊನಾ ವೈರಸ್ ವುಹಾನ್ ಪ್ರಯೋಗಾಲಯದಿಂದ ಹರಡಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ.
ವಾಷಿಂಗ್ಟನ್ ಪೋಸ್ಟ್, ಬಜ್‌ಫೀಡ್ ನ್ಯೂಸ್ ಮತ್ತು ಸಿಎನ್‌ಎನ್‌ಗಳು 2020ರ ಜನವರಿಯಿಂದ ಜೂನ್‌ವರೆಗಿನ ಸುಮಾರು 3,000 ಪುಟಗಳ ಇ–ಮೇಲ್ ಮಾಹಿತಿಯನ್ನು ಅಮೆರಿಕದ ಮಾಹಿತಿ ಸ್ವಾತಂತ್ರ್ಯ ಕಾಯ್ದೆ (ಎಫ್‌ಒಐ) ಅಡಿ ಪಡೆದಿದ್ದವು ಎಂದು ‘ಎಎನ್‌ಐ’ ವರದಿ ಮಾಡಿದೆ.
ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಿಂದಲೇ ಹರಡಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬೇಹುಗಾರರೂ ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.