ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಕ್ಷಿಣ ಕೆರೊಲಿನಾದ ರಿಪಬ್ಲಿಕನ್ ಸ್ಪರ್ಧೆಯಲ್ಲಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸ್ಪರ್ಧಿಸಲು ಮತ್ತಷ್ಟು ಹತ್ತಿರವಾಗಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕಾಗಿ ಭಾರತ ಮೂಲದ ರಾಜಕಾರಣಿ ನಿಕ್ಕಿ ಹ್ಯಾಲೆ ಅವರು 77 ವರ್ಷದ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದರು.
ಇತ್ತೀಚೆಗಷ್ಟೇ ನಡೆದಿದ್ದ ನೆವಡಾ ರಾಜ್ಯದಲ್ಲಿ ಚುನಾವಣೆಯಲ್ಲೂ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದರು. ಈ ಚುನಾವಣೆಯಿಂದ ದೂರ ಉಳಿದಿದ್ದ ನಿಕ್ಕಿ ಹ್ಯಾಲೆ, ‘ಚುನಾವಣೆಯು ನ್ಯಾಯಯುತವಾಗಿ ನಡೆದಿಲ್ಲ. ಇದು, ಟ್ರಂಪ್‌ಗೆ ಅನುಕೂಲಕರವಾಗುವಂತೆ ಇತ್ತು’ ಎಂದು ದೂರಿದ್ದರು.
ನೆವಡಾದಲ್ಲಿ ಗೆದ್ದ ಟ್ರಂಪ್, ರಾಜ್ಯದ ಎಲ್ಲ 26 ಪ್ರತಿನಿಧಿಗಳ ಬೆಂಬಲ ಪಡೆದಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುವುದಕ್ಕೆ ಅವರು 1,215 ಪ್ರತಿನಿಧಿಗಳ ಬೆಂಬಲ ಪಡೆಯಬೇಕಿದ್ದು, ಮಾರ್ಚ್ ವೇಳೆಗೆ ಟ್ರಂಪ್ ಅವರು ಈ ಸಂಖ್ಯೆಯಷ್ಟು ಪ್ರತಿನಿಧಿಗಳ ಬೆಂಬಲ ಗಿಟ್ಟಿಸಬಹುದು ಎಂದು ಮೂಲಗಳು ಹೇಳಿವೆ.
2016ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಟ್ರಂಪ್, 2020ರಲ್ಲಿ ಪರಾಭವಗೊಂಡಿದ್ದರು. 2024ರಲ್ಲಿ ಮರು ಆಯ್ಕೆ ಬಯಸಿದ್ದು, ಅವರು ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.