ADVERTISEMENT

ಆಸ್ತಿ ಮೌಲ್ಯ ಹೆಚ್ಚಿಸಿಕೊಂಡ ಆರೋಪ: ಡೊನಾಲ್ಡ್ ಟ್ರಂಪ್‌ ಸಾಮ್ರಾಜ್ಯಕ್ಕೆ ಉರುಳು

ರಾಯಿಟರ್ಸ್
Published 2 ಅಕ್ಟೋಬರ್ 2023, 16:28 IST
Last Updated 2 ಅಕ್ಟೋಬರ್ 2023, 16:28 IST
ಡೊನಾಲ್ಡ್‌ ಟ್ರಂಪ್‌ –ಎಎಫ್‌ಪಿ ಚಿತ್ರ
ಡೊನಾಲ್ಡ್‌ ಟ್ರಂಪ್‌ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಕುಟುಂಬವು ಅನುಕೂಲಕರ ಸಾಲ ಮತ್ತು ವಿಮಾ ಸೌಲಭ್ಯ ಪಡೆಯಲು ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿದೆ.

ಡೆಮಾಕ್ರಟಿಕ್‌ ನ್ಯೂಯಾರ್ಕ್‌ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್ ಅವರು, ಟ್ರಂಪ್‌ ಮತ್ತು ಅವರ ಕುಟುಂಬದ ವಿರುದ್ಧ ಈ ವಂಚನೆ ಆರೋಪಕ್ಕೆ ಸಂಬಂಧಿಸಿ ಸಿವಿಲ್‌ ಮೊಕದ್ದಮೆ ಹೂಡಿದ್ದಾರೆ. 

2024ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿ‍ಪಬ್ಲಿಕನ್‌ ಪಕ್ಷದಿಂದ ಮತ್ತೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಟ್ರಂಪ್‌ ಅವರಿಗೆ ಈ ಪ್ರಕರಣವು ಹೊಸ ತಲೆನೋವು ತಂದಿದೆ. ಅಲ್ಲದೇ, ಅವರ ರಿಯಲ್‌ ಎಸ್ಟೇಟ್‌ ಸಾಮ್ರಾಜ್ಯಕ್ಕೂ ಉರುಳಾಗಿ ಪರಿಣಮಿಸಿದೆ.  

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿ ಟ್ರಂಪ್‌ಗೆ ₹ 2,075 ಕೋಟಿ ದಂಡ ವಿಧಿಸಬೇಕು. ನ್ಯೂಯಾರ್ಕ್‌ನಲ್ಲಿ ಟ್ರಂಪ್‌ ಹಾಗೂ ಅವರ ಪುತ್ರರಾದ ಡೊನಾಲ್ಡ್‌ ಜೂನಿಯರ್‌ ಹಾಗೂ ಎರಿಕ್‌ ಅವರು ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಬೇಕು. ಅವರ ಒಡೆತನದ ಕಂಪನಿಯು  ರಿಯಲ್‌ ಎಸ್ಟೇಟ್‌ ಚಟುವಟಿಕೆ ನಡೆಸದಂತೆಯೂ ಐದು ವರ್ಷಗಳ ಕಾಲ ನಿರ್ಬಂಧ ವಿಧಿಸಬೇಕು ಎಂದು ಅಟಾರ್ನಿ ಜನರಲ್‌ ಜೇಮ್ಸ್ ಕೋರಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಟ್ರಂಪ್‌, ‘ಇದೊಂದು ರಾಜಕೀಯ ಪ್ರೇರಿತ ಪಿತೂರಿ’ ಎಂದು ದೂರಿದ್ದಾರೆ.

ಆರೋಪ ಏನು?:

ಟ್ರಂಪ್‌ ಮತ್ತು ಅವರ ಕುಟುಂಬವು 2011ರಿಂದ 2021ರ ನಡುವೆ ಆಸ್ತಿ ಮೌಲ್ಯವನ್ನು ₹ 15,770 ಕೋಟಿಯಿಂದ ₹ 29,880 ಕೋಟಿಗೆ ಹೆಚ್ಚಿಸಿಕೊಂಡಿದೆ. ಆ ಮೂಲಕ ಅನುಕೂಲಕರ ಸಾಲ ಮತ್ತು ವಿಮಾ ಸೌಲಭ್ಯ ಪಡೆದಿದೆ ಎಂದು ಜೇಮ್ಸ್ ಆಪಾದಿಸಿದ್ದಾರೆ.

ಈಗಾಗಲೇ, ನ್ಯಾಯಾಧೀಶರಾದ ಆರ್ಥರ್ ಎಂಗೊರಾನ್ ಅವರು, ಸೆಪ್ಟೆಂಬರ್‌ 26ರಂದು ನೀಡಿರುವ ಆದೇಶದಲ್ಲಿ, ‘ಜೇಮ್ಸ್‌ ಅವರು ಟ್ರಂಪ್‌ ಹಾಗೂ ಅವರ ಅವಲಂಬಿತರು ಎಸಗಿರುವ ವಂಚನೆ ಬಗ್ಗೆ ಸಾಬೀತುಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಅಲ್ಲದೇ, ಟ್ರಂಪ್‌ಗೆ ಸೇರಿದ 10 ವ್ಯಾಪಾರ ಘಟಕಗಳ ಪ್ರಮಾಣ ಪತ್ರಗಳನ್ನು ರದ್ದುಪಡಿಸಿದ್ದಾರೆ. ಇದರಲ್ಲಿ ನ್ಯೂಯಾರ್ಕ್‌ನಲ್ಲಿರುವ ಟ್ರಂಪ್‌ ಟವರ್‌ ಹಾಗೂ ಅವರ ಒಡೆತನದ ಗಾಲ್ಪ್‌ ಕ್ಲಬ್‌ ಕೂಡ ಸೇರಿದೆ.

ಹಾಗಾಗಿ, ಟ್ರಂಪ್ ಎಷ್ಟು ಮೊತ್ತದ ದಂಡ ಪಾವತಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಯಾವುದೇ ಕ್ರಿಮಿನಲ್ ಜುಲ್ಮಾನೆ ಎದುರಿಸಿಲ್ಲ. ಆದರೆ, ಅವರ ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.