ADVERTISEMENT

ಕಾಶ್ಮೀರ ವಿಚಾರದಲ್ಲಿ ಪಾಕ್ ತಾಳಕ್ಕೆ ಕುಣಿಯುತ್ತಿರುವ ಟರ್ಕಿ: ಎಚ್ಚರಿಸಿದ ಭಾರತ

ಏಜೆನ್ಸೀಸ್
Published 15 ಫೆಬ್ರುವರಿ 2020, 5:38 IST
Last Updated 15 ಫೆಬ್ರುವರಿ 2020, 5:38 IST
ಭಾರತ ಮತ್ತು ಟರ್ಕಿ ರಾಜತಾಂತ್ರಿಕ ಬಿಕ್ಕಟ್ಟು
ಭಾರತ ಮತ್ತು ಟರ್ಕಿ ರಾಜತಾಂತ್ರಿಕ ಬಿಕ್ಕಟ್ಟು   

ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ನಾವುಪಾಕಿಸ್ತಾನದ ನಿಲುವನ್ನು ಸಮರ್ಥಿಸುತ್ತೇವೆ. ಕಾಶ್ಮೀರದ ಜನರ ಭಾವನೆಗಳಿಗೆ ಸ್ಪಂದಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದ ಟರ್ಕಿ ಅಧ್ಯಕ್ಷ ಎರ್ಡೊಗನ್ ತಯ್ಯಪೆ ಹೇಳಿಕೆಯನ್ನು ಭಾರತ ಖಂಡಿಸಿದೆ. ಟರ್ಕಿ ಅಧ್ಯಕ್ಷರ ಹೇಳಿಕೆಯುಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.

ಟರ್ಕಿ ಅಧ್ಯಕ್ಷರ ಪಾಕಿಸ್ತಾನ ಭೇಟಿ ವೇಳೆ ಎರಡೂ ದೇಶಗಳುಹೊರಡಿಸಿದ್ದ ಜಂಟಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರವು, ‘ಭಾರತದ ಅವಿಭಾಜ್ಯ ಅಂಗವಾಗಿರುವಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖವಿರುವ ಅಂಶಗಳನ್ನು ಒಪ್ಪಲು ಆಗುವುದಿಲ್ಲ’ ಎಂದು ಜಂಟಿ ಹೇಳಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದೆ.

‘ಭಾರತದ ಆಂತರಿಕ ವಿಚಾರಗಳಲ್ಲಿ ಇತರ ದೇಶಗಳಮಧ್ಯಪ್ರವೇಶವನ್ನು ನಾವು ಸಹಿಸುವುದಿಲ್ಲ. ಟರ್ಕಿ ನಾಯಕತ್ವ ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವವನ್ನು ಸರಿಯಾಗಿ ಗ್ರಹಿಸಿ ನಂತರ ಪ್ರತಿಕ್ರಿಯಿಸಬೇಕು. ಪಾಕಿಸ್ತಾನದಿಂದ ಭಾರತ ಎದುರಿಸುತ್ತಿರುವ ಭಯೋತ್ಪಾದನೆಯ ಆತಂಕವನ್ನು ಅರ್ಥಮಾಡಿಕೊಳ್ಳಬೇಕು’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದರು.

ADVERTISEMENT

ಭಾರತದ ತಕರಾರು ನಿರ್ಲಕ್ಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್ ತಯ್ಯಪೆ ಶುಕ್ರವಾರ ಮತ್ತೊಮ್ಮೆ ‘ಪಾಕಿಸ್ತಾನದ ನಿಲುವನ್ನು ಟರ್ಕಿ ಬೆಂಬಲಿಸುತ್ತದೆ’ ಎಂದು ಪುನರುಚ್ಚರಿಸಿದ್ದರು.

‘ಹಲವು ದಶಕಗಳಿಂದ ನಮ್ಮ ಕಾಶ್ಮೀರಿ ಸೋದರರು ಕಷ್ಟ ಅನುಭವಿಸಿದ್ದಾರೆ. ಈಚೆಗೆ (ಭಾರತ) ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳಿಂದ ಈ ಕಷ್ಟ ಇನ್ನಷ್ಟು ಹೆಚ್ಚಾಗಿದೆ’ ಎಂದು ಕಳೆದ ಆಗಸ್ಟ್‌ನಲ್ಲಿ ಎರ್ಡೊಗನ್ ಜಮ್ಮು ಕಾಶ್ಮೀರ ಉಲ್ಲೇಖಿಸಿ ಹೇಳಿಕೆ ನೀಡಿದ್ದರು.

‘ಕಾಶ್ಮೀರವು ನಿಮ್ಮಂತೆ ನಮಗೂ ಬಹಳ ಹತ್ತಿರದ ವಿಷಯವಾಗಿದೆ. ನ್ಯಾಯಯುತವಾದ ಮತ್ತು ನಿಷ್ಪಕ್ಷಪಾತ ನಿಲುವು ಆಧರಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಕಾಶ್ಮೀರದ ವಿಚಾರದಲ್ಲಿ ನಾವು ಸದಾ ನ್ಯಾಯ, ಶಾಂತಿ ಮತ್ತು ಸಂವಾದದ ಪರ ನಿಲ್ಲುತ್ತೇವೆ’ ಎಂದು ಎರ್ಡೊಗನ್ ಈಗ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿಯೂ ಟರ್ಕಿ ಅಧ್ಯಕ್ಷರು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು. ‘ಭಾರತದ ಆಂತರಿಕ ವಿಚಾರವನ್ನು ಟರ್ಕಿ ಪ್ರಸ್ತಾಪಿಸಿರುವುದು ವಿಷಾದದ ಸಂಗತಿ’ ಎಂದು ಭಾರತ ತನ್ನ ಆಕ್ಷೇಪ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.