ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದೆ. ಜತೆಗೆ, ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಲ್ ಒಳಗೆ ಏಕಾಏಕಿ ನುಗ್ಗಿರುವ ಜನರ ಗುಂಪು ಬಟ್ಟೆಗಳು ಮತ್ತು ಸಿಕ್ಕಸಿಕ್ಕ ವಸ್ತುಗಳನ್ನು ದೋಚುತ್ತಿರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ‘ಡ್ರೀಮ್ ಬಜಾರ್’ ಮಾಲ್‌ನ ಉದ್ಘಾಟನೆ ಪ್ರಯುಕ್ತ ಮಾಲೀಕರು ವಿಶೇಷ ರಿಯಾಯಿತಿ ಘೋಷಿಸಿದ್ದರು. ಜತೆಗೆ ಸಾರ್ವಜನಿಕರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ, ನಿಗದಿಯಂತೆ ಕಾರ್ಯಕ್ರಮ ನಡೆಯಲಿಲ್ಲ. ಹಾಗಾಗಿ ಮಾಲ್ ವ್ಯವಸ್ಥಾಪಕರು ಬಂದ್ ಮಾಡಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಜನರು ಮಾಲ್ ಅನ್ನು ದ್ವಂಸಗೊಳಿಸಿದ್ದಾರೆ. ಜತೆಗೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಜನರ ಗುಂಪು ತಾವು ವಸ್ತುಗಳನ್ನು ಲೂಟಿ ಮಾಡುತ್ತಿರುವ ದೃಶ್ಯಗಳನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡು ಸಂಭ್ರಮಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬರು ಈ ಮಾಲ್ ಅನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಹಾಗಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಮಾಲ್ ಸಿಬ್ಬಂದಿ ಅಸಹಾಯಕತೆ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.