ಮಾನುಸ್, ಬ್ರೆಜಿಲ್: ಸದಾ ಹಸಿರು, ತುಂಬಿದ ನದಿಗಳಿಂದ ಕಂಗೊಳಿಸುತ್ತಿದ್ದ ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶ ಅತಿಯಾದ ಮಾನವ ಚಟುವಟಿಕೆ ಮತ್ತು ಹವಾಮಾನ ವೈಪರಿತ್ಯದಿಂದ ಇತ್ತೀಚಿನ ವರ್ಷಗಳಲ್ಲಿ ತೀವ್ರ ಬದಲಾವಣೆ ಅನುಭವಿಸುತ್ತಿದೆ.
ಇದಕ್ಕೆ ತಾಜಾ ಉದಾಹರಣೆ ಅಮೆಜಾನ್ ನದಿಯ ಅತಿ ದೊಡ್ಡ ಉಪ ನದಿಯಾದ ಹಾಗೂ ಜಗತ್ತಿನ ಆರನೇ ಅತಿ ಉದ್ದದ ನೀಗ್ರೋ ನದಿ ಸಂಪೂರ್ಣವಾಗಿ ಬತ್ತಿ ಹೋಗುತ್ತಿದೆ. ಸದಾ ತುಂಬಿ ಹರಿಯುತ್ತಿದ್ದ ಈ ನದಿಯಲ್ಲಿ ನೀರಿನ ಪ್ರಮಾಣ 122 ವರ್ಷಗಳಲ್ಲಿಯೇ ಅತಿ ಕಡಿಮೆ ಮಟ್ಟಕ್ಕೆ ಇಳಿದಿದೆ.
ಕಾಡ್ಗಿಚ್ಚು, ಬರಗಾಲದಿಂದ ಕಂಗೆಟ್ಟಿರುವ ಅಮೆಜಾನ್ ಪ್ರದೇಶದ ಬಹುತೇಕ ನದಿಗಳ ಪರಿಸ್ಥಿತಿ ಇದೇ ಆಗಿದೆ.
ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ನೀಗ್ರೋ ನದಿ 22 ಮೀಟರ್ ಎತ್ತರಕ್ಕೆ ತುಂಬಿ ಹರಿಯುತ್ತಿತ್ತು. ಆದರೆ, ಇದೇ ಅವಧಿಯಲ್ಲಿ ಈ ನದಿಯ ನೀರಿನ ಪ್ರಮಾಣ 12 ಮೀಟರ್‌ಗೂ ಕೆಳಕ್ಕೆ ಹೋಗಿದೆ.
ಜಗತ್ತಿನ ನಾಲ್ಕನೇ ಅತಿ ಉದ್ದದ ನದಿ ಎಂದು ಹೆಸರಾಗಿರುವ ಅಮೆಜಾನ್ ಕಾಡುಗಳಲ್ಲಿ ಹರಿಯುವ ಮಡೈರಾ ನದಿಯ ನೀರಿನ ಪ್ರಮಾಣವು ವ್ಯಾಪಕವಾಗಿ ಕಡಿಮೆಯಾಗಿದೆ. ಅಮೆಜಾನ್ ನದಿ ಸೇರಿಕೊಳ್ಳುವ ಈ ನದಿಗಳು ಬತ್ತಿ ಹೋಗುತ್ತಿರುವುದರಿಂದ ಅಮೆಜಾನ್ ನದಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.
ಅಮೆಜಾನ್ ಮಳೆಕಾಡುಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆ, ಇಳಿಕೆ ಸಹಜವಾದರೂ ಇತ್ತೀಚೆಗೆ ಕಂಡು ಬರುತ್ತಿರುವ ಇಳಿಕೆ ಪ್ರಮಾಣ ಆತಂಕ ಹುಟ್ಟಿಸುತ್ತಿದೆ ಎಂದು ಅನೇಕ ತಜ್ಞರು ಹೇಳುತ್ತಿದ್ದಾರೆ.
ಈ ನದಿಗಳನ್ನೇ ಆಶ್ರಯಿಸಿ ಜೀವನ ಮಾಡುತ್ತಿದ್ದ ಸ್ಥಳೀಯರಿಗೆ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪ್ರವಾಸೋಧ್ಯಮಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಬ್ರೆಜಿಲ್‌ನ ಮಾನುಸ್ ನಗರದ ಅನೇಕರು ಹೇಳುತ್ತಿದ್ದಾರೆ.
ನೀಗ್ರೋ ನದಿ ಬ್ರೆಜಿಲ್‌ನ ಮಾನುಸ್ ನಗರದ ಬಳಿ ಅಮೆಜಾನ್ ನದಿ ಸೇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.